ದೇಶ

ಗ್ರಾಮೀಣ ರಸ್ತೆ ಯೋಜನೆ; 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಭಾರತ-ವಿಶ್ವಬ್ಯಾಂಕ್ ಸಹಿ

Manjula VN
ನವದೆಹಲಿ; ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ಗ್ರಾಮೀಣ ರಸ್ತೆ ಯೋಜನೆಗಾಗಿ ಹೆಚ್ಚುವರಿ ಹಣಕಾಸು ಒದಗಿಸುವ ಉದ್ದೇಶದಿಂದ ಭಾರತ ಸರ್ಕಾರ ಮತ್ತು ವಿಶ್ವ ಬ್ಯಾಂಕ್ 500 ಮಿಲಿಯನ್ ಡಾಲರ್ ಸಾಲ ಒಪ್ಪಂದಕ್ಕೆ ಗುರುವಾರ ಸಹಿ ಹಾಕಿವೆ. 
ಗ್ರಾಮೀಣ ರಸ್ತೆ ಯೋಜನೆಯು ಗ್ರಾಮೀಣಾಭಿವೃದ್ಧಿ ಸಚಿವಾಲಯದ ಯೋಜನೆಯಾಗಿದ್ದು, ಪ್ರತಿಕೂಲ ಹವಾಮಾನವಿರುವ ಪ್ರದೇಶಗಳಲ್ಲಿ 7,000 ಕಿಲೋ ಮೀಟರ್ ಉದ್ದದ ರಸ್ತೆ ನಿರ್ಮಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ಇದರಲ್ಲಿ 3,500 ಕಿಲೋ ಮೀಟರ್ ರಸ್ತೆ ಗ್ರೀನ್ ಟೆಕ್ನಾಲಜಿಯೊಂದಿಗೆ ನಿರ್ಮಾಣಗೊಳ್ಳಲಿದೆ ಎಂದು ವರದಿಗಳು ತಿಳಿಸಿವೆ. 
2004ರಿಂದ ಆರಂಭಗೊಂಡಾಗಿನಿಂದಲೂ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಗೆ ವಿಶ್ವಬ್ಯಾಂಕ್ ಸಹಕಾರ ನೀಡುತ್ತಲೇ ಬಂದಿದೆ. ಪ್ರಮುಖವಾಗಿ ಆರ್ಥಿಕವಾಗಿ ದುರ್ಬಲಗೊಂಡಿರುವ ಹಾಗೂ ಬೆಟ್ಟ-ಗುಡ್ಡಗಳನ್ನು ಹೊಂದಿರುವ ಉತ್ತರ ಭಾರತದ ಬಿಹಾರ, ಹಿಮಾಚಲ ಪ್ರದೇಶ, ಜಾರ್ಖಾಂಡ್, ಮೇಗಾಲಯ, ರಾಜಸ್ತಾನ, ಉತ್ತರಾಖಂಡ ಮತ್ತು ಉತ್ತರಪ್ರದೇಶಗಳಲ್ಲಿನ ರಸ್ತೆ ಅಭಿವೃದ್ಧಿಗಳಿಗೆ ಇದೂವರೆಗೆ ಸಾಲ ಮತ್ತು ಕ್ರೆಡಿಟ್ಸ್ ಗಳಲ್ಲಿ 1.8 ಬಿಲಿಯನ್ ಡಾಲರ್ ಗಳ ಹೂಡಿಕೆ ಮಾಡಿದೆ. 
ಭಾರತ ಸರ್ಕಾರದ ಪರವಾಗಿ ಆರ್ಥಿಕ ವ್ಯವಹಾರಗಳ ಇಲಾಖೆಯ ಜಂಟಿ ಕಾರ್ಯದರ್ಶಿ ಸಮೀರ್ ಕುಮಾರ್ ಖರೆ ಹಾಗೂ ವಿಶ್ವಬ್ಯಾಂಕ್ ಭಾರತ ದೇಶದ ಮುಖ್ಯಸ್ಥ ಜುನೈದ್ ಅಹ್ಮದ್  ಅವರು ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯ ಜಂಟಿ ಕಾರ್ಯದರ್ಶಿ ಅಲ್ಕಾ ಉಪಾಧ್ಯಾಯ ಅವರ ಉಪಸ್ಥಿತಿಯಲ್ಲಿ ಸಾಲ ಒಪ್ಪಂದಕ್ಕೆ ಸಹಿ ಹಾಕಿದರು. 
SCROLL FOR NEXT