ನವದೆಹಲಿ: ಬಹುಕೋಟಿ ಬೋಫೋರ್ಸ್ ಫಿರಂಗಿ ಹಗರಣಕ್ಕೆ ಸಂಬಂಧಿಸಿದಂತೆ ಮರು ತನಿಖೆ ಸಾಧ್ಯವಿಲ್ಲ ಎಂದು ಹೇಳಿರುವ ಸುಪ್ರೀಂ ಕೋರ್ಟ್ ಸಿಬಿಐ ಅರ್ಜಿಯನ್ನು ತಳ್ಳಿ ಹಾಕಿದೆ.
ಸಿಬಿಐ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರ ನೇತೃತ್ವದ ನ್ಯಾಯಪೀಠ, ಸಿಬಿಐ ಮಾಡಿರುವ ಆಕ್ಷೇಪಗಳು ಸರಿಯಿಲ್ಲ ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ ಅರ್ಜಿ ಸಲ್ಲಿಕೆ ವೇಳೆ ಆಗಿರುವ ವಿಳಂಬವನ್ನೂ ಪರಿಗಣಿಸಿರುವ ನ್ಯಾಯಾಲಯ ಮರು ತನಿಖೆ ಸಾಧ್ಯವಿಲ್ಲ ಎಂದು ಹೇಳಿದೆ.
ಅಂತೆಯೇ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಅಜಯ್ ಅಗರ್ವಾಲ್ ಸಲ್ಲಿಸಿರುವ ಪ್ರಕರಣದ ಅರ್ಜಿ ತೀರ್ಪು ಹೈಕೋರ್ಟ್ ನಲ್ಲಿ ಬಾಕಿ ಇದ್ದು, ಸಿಬಿಐ ತನ್ನ ಆಕ್ಷೇಪಗಳೇನಿದ್ದರೂ ಅಲ್ಲಿ ಸಲ್ಲಿಸಬಹುದು ಸಲಹೆ ನೀಡಿದೆ.
ಇನ್ನು ದೆಹಲಿ ಹೈಕೋರ್ಟ್ ನಲ್ಲಿ ಇದೇ ಬೋಫೋರ್ಸ್ ಹಗರಣಕ್ಕೆ ಸಂಬಂಧಿಸಿದಂತೆ ಹಿಂದೂಜ ಸಹೋದರರು 4 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದ ತೀರ್ಪು ಬಾಕಿ ಇದೆ.
1986 ಮಾರ್ಚ್ ತಿಂಗಳಿನಲ್ಲಿ ಭಾರತ ಸರ್ಕಾರ 1,437 ಕೋಟಿ ರೂ. ವೆಚ್ಚದಲ್ಲಿ ಸ್ವೀಡಿಶ್ ಮೂಲದ ಫಿರಂಗಿ ತಯಾರಕಾ ಸಂಸ್ಥೆ ಎಬಿ ಬೋಫೋರ್ಸ್ ಸಂಸ್ಥೆಯಿಂದ 400 ಯೂನಿಟ್ 155ಎಂಎಂ ಹೊವಿಟ್ಜರ್ ಗನ್ ಗಳನ್ನು ಖರೀದಿ ಮಾಡಿತ್ತು. ಇದರಲ್ಲಿ ಭಾರಿ ಪ್ರಮಾಣದ ಅಕ್ರಮ ನಡೆದಿದೆ ಎಂದು ಆರೋಪಿಸಲಾಗಿತ್ತು.