ಕೋಲ್ಕತಾ: ಪಶ್ಚಿಮ ಬಂಗಾಳ ಸರ್ಕಾರ ನವೆಂಬರ್ 14ರಂದು ತನ್ನ ರಾಜ್ಯದ ಸಾಂಪ್ರದಾಯಿಕ ತಿನಿಸು ರಸಗುಲ್ಲ ದಿನ' ಆಚರಿಸಲು ನಿರ್ಧರಿಸಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಬಂಗಾಳದ ರಸಗುಲ್ಲ ಜಿಯೋಗ್ರಾಫಿಕಲ್ ಇಂಡಿಕೇಷನ್(ಜಿಐ) ಟ್ಯಾಗ್ ಪಡೆದು ಒಂದು ವರ್ಷವಾದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ರಸಗುಲ್ಲ ದಿನ ಆಚರಿಸಲು ನಿರ್ಧರಿಸಿದ್ದು, ನವೆಂಬರ್ 14ರಂದು ಹಲವು ವಿಧದ ರಸಗುಲ್ಲಾಗಳನ್ನು ಸವಿಯಬಹುದಾಗಿದೆ ಎಂದು ಹಿಡ್ಕೊ ಅಧ್ಯಕ್ಷ ದೆಬಸಿಶ್ ಸೇನ್ ಅವರು ಪಿಟಿಐಗೆ ತಿಳಿಸಿದ್ದಾರೆ.
ರಸಗುಲ್ಲ ದಿನದಂದು ನ್ಯೂಟೌನ್ ಪ್ರದೇಶದಲ್ಲಿರುವ ಇಕೋ ಪಾರ್ಕ್ ನಲ್ಲಿ ಸಿಹಿ ಹಬ್ ನಿರ್ಮಿಸಲಾಗುವುದು. ಇಲ್ಲಿ ಹಲವು ವಿಧದ ರಸಗುಲ್ಲಗಳನ್ನು ಸವಿಯುವ ಮೂಲಕ ಜಿಐ ಟ್ಯಾಗ್ ಪಡೆದ ಮೊದಲ ವರ್ಷವನ್ನು ಆಚರಿಸಲಾಗುತ್ತಿದೆ ಎಂದು ಸೇನ್ ಹೇಳಿದ್ದಾರೆ.
ಒಂದು ವರ್ಷದ ಹಿಂದೆ ರಸಗುಲ್ಲ ನಮ್ಮ ರಾಜ್ಯದಲ್ಲಿಯೇ ಮೊದಲು ಸಿದ್ಧವಾದದ್ದು ಎಂದು ಒಡಿಶಾ ಮತ್ತು ಪಶ್ಚಿಮ ಬಂಗಾಳ ಕೋಳಿ ಜಗಳ ಮಾಡಿಕೊಳ್ಳುತ್ತಿದ್ದವು. ಆದರೆ ಚೆನ್ನೈಯಲ್ಲಿರುವ ಜಿಯೋಗ್ರಾಫಿಕಲ್ ಇಂಡಿಕೇಷನ್ ಸಂಸ್ಥೆ, ರಸಗುಲ್ಲ ಪಶ್ಚಿಮ ಬಂಗಾಳದ ಸಾಂಪ್ರದಾಯಿಕ ತಿನಿಸು ಎಂದು ಹೇಳುವ ಮೂಲಕ ವಿವಾದಕ್ಕೆ ತೆರೆ ಎಳೆದಿತ್ತು.