ಲಖನೌ: ಬೆಳಕಿನ ಹಬ್ಬ ದೀಪಾವಳಿ ಪ್ರಯುಕ್ತ ಮಂಗಳವಾರ ಅಯೋಧ್ಯಾ ಪಟ್ಟಣದಲ್ಲಿ ನಡೆದ ದೀಪೋತ್ಸವ ಹೊಸ ದಾಖಲೆ ಬರೆದಿದ್ದು, ಏಕಕಾಲಕ್ಕೆ ಸುಮಾರು ಮೂರು ಲಕ್ಷ ಹಣತೆ ಬೆಳಗಿಸುವ ಮೂಲಕ ಗಿನ್ನೆಸ್ ದಾಖಲೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸರಯೂ ನದೀ ತೀರದಲ್ಲಿ ನಡೆದ ಈ ದೀಪೋತ್ಸವದಲ್ಲಿ 3,01,152 ಹಣತೆಗಳನ್ನು ಬೆಳಗಿಸಲಾಗಿದ್ದು, ಗಿನ್ನೆಸ್ ದಾಖಲೆಯಾಗಿ ಪರಿಗಣಿಸಲ್ಪಟ್ಟಿದೆ ಎಂದು ಗಿನ್ನೆಸ್ ವಿಶ್ವ ದಾಖಲೆಯ ತೀರ್ಪುಗಾರ ರಿಶಿ ನಾಥ್ ಅವರು ಹೇಳಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಸಮ್ಮುಖದಲ್ಲಿ ರಿಶಿ ನಾಥ್ ಅವರು ಅಯೋಧ್ಯೆ ದೀಪೋತ್ಸವ ಗಿನ್ನೆಸ್ ದಾಖಲೆ ಸೇರಿದ್ದನ್ನು ಘೋಷಿಸಿದರು.
ಇದೇ ಸಂದರ್ಭದಲ್ಲಿ ಸಿಎಂ ಯೋಗಿ ಅವರು ಕೆಲವೊಂದು ಪ್ರಮುಖ ಘೋಷಣೆಗಳನ್ನು ಮಾಡಿದರು. ಅವುಗಳಲ್ಲಿ ಮುಖ್ಯವೆಂದರೆ ಅಯೋಧ್ಯೆಯಲ್ಲಿ ಶೀಘ್ರವೇ ಭಗವಾನ್ ಶ್ರೀರಾಮನ ಭವ್ಯವಾದ ಮೂರ್ತಿಯೊಂದನ್ನು ಸ್ಥಾಪಿಸಲಾಗುವುದು ಎನ್ನುವುದಾಗಿದೆ.