ನವದೆಹಲಿ: ತಮ್ಮ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಶುಕ್ರವಾರ ಕೇಂದ್ರ ಜಾಗೃತ ಆಯೋಗದ ಆಯುಕ್ತ ಕೆ ವಿ ಚೌಧರಿ ಅವರ ಮುಂದೆ ಹಾಜರಾಗಿದ್ದಾರೆ.
ಕೆ ವಿ ಚೌಧರಿ ನೇತೃತ್ವದ ಜಾಗೃತ ದಳದ ತಂಡದಲ್ಲಿ ಆಯುಕ್ತ ಶರಾದ್ ಕುಮಾರ್ ಮತ್ತು ಟಿ ಎಂ ಬಾಸಿನ್ ಕೂಡ ಇದ್ದಾರೆ. ಇವರ ಮುಂದೆ ವಿಚಾರಣೆಗೆ ಅಲೋಕ್ ವರ್ಮಾ ಹಾಜರಾಗಿದ್ದು ಈ ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ಅಸ್ತಾನಾ ಮಾಡಿರುವ ಭ್ರಷ್ಟಾಚಾರ ಆರೋಪಕ್ಕೆ ಸಂಬಂಧಪಟ್ಟಂತೆ ಕೇಂದ್ರ ಜಾಗ್ರತ ದಳ ಎರಡು ವಾರಗಳೊಳಗೆ ವಿಚಾರಣೆ ಪೂರ್ಣಗೊಳಿಸುವಂತೆ ಸುಪ್ರೀಂ ಕೋರ್ಟ್ ಅಕ್ಟೋಬರ್ 26ರಂದು ಆದೇಶ ನೀಡಿತ್ತು.
ವರ್ಮ ಮತ್ತು ಅಸ್ತಾನಾ ಅವರನ್ನು ಕೇಂದ್ರ ಸರ್ಕಾರ ರಜೆಯ ಮೇಲೆ ಕಳುಹಿಸಿದ್ದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ತನಿಖೆಗೆ ಸಂಬಂಧಿಸಿದಂತೆ ವರ್ಮಾ ನಿನ್ನೆ ಕೂಡ ಅಧಿಕಾರಿಗಳನ್ನು ಭೇಟಿ ಮಾಡಿದ್ದರು.