ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ
ಗುವಾಹಟಿ: ಕೇಂದ್ರದ ಆಡಳಿತಾರೂಢ ಎನ್'ಡಿಎ ಸರ್ಕಾರದ ವಿರುದ್ಧ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಹಿರಿಯ ನಾಯಕ ಪಿ. ಚಿದಂಬರಂ ಅವರು, ನೋಟು ನಿಷೇಧ ನಿರ್ಧಾರ ಕೆಟ್ಟ ಕಲ್ಪನೆಯ ನಡೆಯಾಗಿದೆ ಎಂದು ಶುಕ್ರವಾರ ಹೇಳಿದ್ದಾರೆ.
ಖೋಟಾ ನೋಟು, ಕಾಳಧನವನ್ನು ಬಗ್ಗು ಬಡಿಯುವ ಉದ್ದೇಶದೊಂದಿಗೆ 2016ರ ನ.8 ರಂದು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದ ಅಪನಗದೀಕರಣಕ್ಕೆ ಗುರುವಾರ ಎರಡು ವರ್ಷಗಳು ಪೂರ್ಣಗೊಂಡಿದೆ. ನೋಟು ನಿಷೇಧಕ್ಕೆ ಎರಡು ವರ್ಷಗಳು ಪೂರ್ಣಗೊಂಡಿರುವ ಹಿನ್ನಲೆಯಲ್ಲಿ ಬಿಜೆಪಿ ಸಂಭ್ರಮವನ್ನಾಚರಿಸುತ್ತಿದೆ. ಆದರೆ, ಬಿಜೆಪಿಗೆ ತದ್ವಿರುದ್ಧವಾಗಿ ನೋಟು ನಿಷೇಧವನ್ನು ವಿರೋಧಿಸಿದ್ದ ಕಾಂಗ್ರೆಸ್ ಭಾರತೀಯ ಪ್ರಜಾಪ್ರಭುತ್ವದಲ್ಲಿ ಹಾಗೂ ಆರ್ಥಿಕತೆಯ ಕರಾಳ ದಿನ ಆಚರಿಸುತ್ತಿದೆ.
ಇದರ ಬೆನ್ನಲ್ಲೇ ಪ್ರತಿಕ್ರಿಯೆ ನೀಡಿರುವ ಚಿದಂಬರಂ ಅವರು, ನೋಟು ನಿಷೇಧ ನಿರ್ಧಾರ ಕೆಟ್ಟ ಕಲ್ಪನೆಯ ನಡೆಯಾಗಿದ್ದು, ಹಣ ಮತ್ತು ಆರ್ಥಿಕತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಂಪೂರ್ಣವಾಗಿ ಜ್ಞಾನವಿಲ್ಲದ ಒಬ್ಬ ಅಥವಾ ಹೆಚ್ಚು ವ್ಯಕ್ತಿಗಳಿಂದ ಪ್ರೇರೇಪಿಸಲ್ಪಟ್ಟಿದೆ ಎಂದು ಹೇಳಿದ್ದಾರೆ.
ಅಪನಗದೀಕರಣಕ್ಕೆ ಎರಡು ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಫೇಸ್ ಬುಕ್ ನಲ್ಲಿ ಲೇಖನ ಬರೆದಿದ್ದ ವಿತ್ತ ಸಚಿವ ಅರುಣ್ ಜೇಟ್ಲಿಯವರು ನೋಟ್ ಬಂದಿಯಿಂದಾಗಿ ಆರ್ಥಿಕತೆ ಹೊಸ ರೂಪ ಸಿಕ್ಕಿದೆ. ತೆರಿಗೆ ಜಾಲ ಹಿರಿದಾಗಿದೆ. ಬಡವರು ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚು ಸಂಪನ್ಮೂಲ ವ್ಯಯಿಸಲು ಸರರ್ಕಾರಕ್ಕೆ ಸಾಧ್ಯವಾಗಿದೆ ಎಂದು ಸಮರ್ಥಿಸಿಕೊಂಡಿದ್ದರು.