ನವದೆಹಲಿ: ದೆಹಲಿಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಂದಹಾರ್ ಗೆ ತೆರಳುತ್ತಿದ್ದ ವಿಮಾನ ಅಪಹರಣ ಮಾಡುವ ವದಂತಿ ಕೆಲ ಕಾಲ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಶನಿವಾರ ನಡೆದಿದೆ.
ದೆಹಲಿ ಮತ್ತು ಕಂದಹಾರ್ ನಡುವೆ ಸಂಚರಿಸುವ ಏರಿಯಾನಾ ಅಫ್ಘಾನ್ ಏರ್ಲೈನ್ ವಿಮಾನದೊಳಗೆ ಪೈಲಟ್ ಅಚಾತುರ್ಯದಿಂದ ಹೈಜಾಕ್ ಗುಂಡಿ ಒತ್ತಿದ್ದೇ ಈ ಆತಂಕಕ್ಕೆ ಕಾರಣವಾಗಿತ್ತು. ತಕ್ಷಣವೇ ಭದ್ರತಾ ಸಿಬ್ಬಂದಿ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಒಯ್ದು ತಪಾಸಣೆ ನಡೆಸಿದರು.
ಕಂದಹಾರ್ ಗೆ ತೆರಳುತ್ತಿದ್ದ ವಿಮಾನದ ಸಿಬ್ಬಂದಿ ಪ್ರಮಾದವಶಾತ್ ಹೈಜಾಕ್ ಗುಂಡಿ ಒತ್ತಿದ್ದರಿಂದ ಆತಂಕ ಉಂಟಾಯಿತು. ಕೂಡಲೇ ವಿಮಾನವನ್ನು ದೂರಕ್ಕೆ ಒಯ್ದು ತಪಾಸಣೆ ನಡೆಸಿದಾಗ ಸತ್ಯಾಂಶ ಬಯಲಾಯಿತು. ಅಂತಿಮವಾಗಿ ವಿಮಾನ ಮಧ್ಯಾಹ್ನ 3:30ಕ್ಕೆ ಪ್ರಯಾಣ ಬೆಳೆಸಿತು ಎಂದು ಭದ್ರತಾ ಮೂಲಗಳು ತಿಳಿಸಿವೆ.
ಅಲಾರಂ ಮೊಳಗಿದ ತಕ್ಷಣ ಏರ್ಪೋರ್ಟ್ ಭದ್ರತಾ ಸಿಬ್ಬಂದಿ ಹಾಗೂ ಎನ್ ಎಸ್ ಜಿ ಕಮಾಂಡೊಗಳು ವಿಮಾನವನ್ನು ಸುತ್ತುವರಿದು ವಶಕ್ಕೆ ತೆಗೆದುಕೊಂಡರು. ಪೈಲಟ್ನ ಅಚಾತುರ್ಯದಿಂದ ಈ ಪ್ರಮಾದವಾಗಿದೆ. ಪೈಲಟ್ ಈ ಬಗ್ಗೆ ಲಿಖಿತವಾಗಿ ಒಪ್ಪಿಕೊಂಡ ಬಳಿಕ ವಿಮಾನದ ಪ್ರಯಾಣಕ್ಕೆ ಅನುಮತಿ ನೀಡಲಾಯಿತು ಎಂದು ಅವರು ಹೇಳಿದ್ದಾರೆ.
ವಿಮಾನದಲ್ಲಿ 9 ಮಂದಿ ಸಿಬ್ಬಂದಿ ಹಾಗೂ 1 ಮಗುವೂ ಸೇರಿದಂತೆ 124 ಪ್ರಯಾಣಿಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics