ಪತ್ನಿಗಾಗಿ ಮಿನಿ ತಾಜ್ ಮಹಲ್ ನಿರ್ಮಿಸಿದ್ದ ಖಾದ್ರಿ ಅಪಘಾತದಲ್ಲಿ ನಿಧನ
ಘಾಜಿಯಾಬಾದ್: ಅಗಲಿದ ಪತ್ನಿಯ ನೆನಪಿಗಾಗಿ ಪುಟ್ಟ ತಾಜ್ ಮಹಲ್ ಪ್ರತಿಕೃತಿ ನಿರ್ಮಿಸಿ ಖ್ಯಾತಿ ಪಡೆದಿದ್ದ ಉತ್ತರಪ್ರದೇಶದ ಬುಲಂದ್ ಶೆಹರ್ ಜಿಲ್ಲೆಯ ನಿವೃತ್ತ ಪೋಸ್ಟ್ ಮಾಸ್ಟರ್ ಫೈಜುಲ್ ಹಸನ್ ಖಾದ್ರಿ (83), ರಸ್ತೆ ಅಪಘಾವೊಂದರಲ್ಲಿ ಶುಕ್ರವಾರ ನಿಧನರಾಗಿದ್ದಾರೆ.
ಕೇಸರ್ ಕಲನ್ ನಲ್ಲಿ ನಡೆದ ಹಿಟ್ ಆ್ಯಂಡ್ ರನ್ ಪ್ರಕರಣದಲ್ಲಿ ಖಾತ್ರಿಯವರು ತೀವ್ರವಾಗಿ ಗಾಯಗೊಂಡಿದ್ದರು. ಗಾಯಗೊಂಡಿದ್ದ ಖಾದ್ರಿಯವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮೃತಪಟ್ಟಿದ್ದಾರೆಂದು ತಿಳಿದುಬಂದಿದೆ.
2011ರಲ್ಲಿ ಪತ್ನಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ ಬಳಿಕ ಪಿಂಚಣಿ ಹಣ ಹಾಗೂ ಜಮೀನು ಮಾರಿ ಕಾಸೆರ್ ಕಲಾನ್ ಗ್ರಾಮದ ತಮ್ಮ ಮನೆಯ ಸಮೀಪ ಪತ್ನಿಯ ಸಮಾಧಿಯ ಮೇಲೆ ಇಟ್ಟಿಗೆ ಹಾಗೂ ಸಿಮೆಂಟ್ ನಿಂದ 5,500 ಚದರ ಅಡಿ ಪ್ರದೇಶದಲ್ಲಿ ಪುಟ್ಟದಾದ ತಾಜ್ ಮಹಲ್ ಮಾದರಿ ಗೋರಿಯನ್ನು ಖಾದ್ರಿ ನಿರ್ಮಿಸಿದ್ದರು. ಇದೀಗ ಅವರ ಆಸೆಯಂತೆ ಪತ್ನಿಯ ಸಮಾಧಿ ಪಕ್ಕದಲ್ಲೇ ಖಾದ್ರಿ ಅವರ ದೇಹವನ್ನು ಸಮಾಧಿ ಮಾಡಲಾಗಿದೆ.