Congress President Rahul Gandhi
ಭೋಪಾಲ್: ಚುನಾವಣಾ ಕಣ ಮಧ್ಯಪ್ರದೇಶದಲ್ಲಿ ಹೊಸ ವಿವಾದವೊಂದನ್ನು ಕಾಂಗ್ರೆಸ್ ಸೃಷ್ಟಿಸಿದ್ದು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ ಎಸ್ಎಸ್ ನ್ನು ನಿಷೇಧಿಸುವುದಾಗಿ ಘೋಷಣೆ ಮಾಡಿದೆ.
ಸುಮಾರು 15 ವರ್ಷಗಳಿಂದ ಕಾಂಗ್ರೆಸ್ ನ್ನು ಮಧ್ಯಪ್ರದೇಶದ ಜನತೆ ಅಧಿಕಾರದಿಂದ ದೂರವಿಟ್ಟಿದ್ದು, ಈ ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ ಎಸ್ಎಸ್ ಶಾಖೆಗಳನ್ನು ನಿಷೇಧಿಸಿ, ರಾಜ್ಯ ಸರ್ಕಾರಿ ನೌಕರರು ಆರ್ ಎಸ್ಎಸ್ ಶಾಖೆಗಳಿಗೆ ತೆರಳದಂತೆ ನಿರ್ಬಂಧ ವಿಧಿಸುವುದಾಗಿ ಕಾಂಗ್ರೆಸ್ ಹೇಳಿದೆ.
ಪ್ರತಿ ಬಾರಿಯೂ ಆರ್ ಎಸ್ಎಸ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ವಿವಾದವನ್ನು ಮೈಮೇಲೆಳೆದುಕೊಳ್ಳುತ್ತಿದ್ದು, ಈ ಹಿಂದೆ ಗಾಂಧಿ ಹತ್ಯೆ ವಿಚಾರವಾಗಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರ್ ಎಸ್ಎಸ್ ವಿರುದ್ಧ ಆರೋಪ ಮಾಡಿ ವಿವಾದ ಉಂಟುಮಾಡಿದ್ದರು.
ಈಗ ಮಧ್ಯಪ್ರದೇಶದಲ್ಲಿ ಚುನಾವಣೆ ಗೆದ್ದರೆ ಆರ್ ಎಸ್ಎಸ್ ಶಾಖೆಗಳನ್ನು ನಿಷೇಧಿಸುವುದಾಗಿ ಕಾಂಗ್ರೆಸ್ ಹೇಳಿದ್ದು, ತನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಈ ಹೇಳಿಕೆಯಿಂದ ಕಾಂಗ್ರೆಸ್ ಮನಸ್ಥಿತಿ ಬಯಲಾಗಿದ್ದು, ಕಾಂಗ್ರೆಸ್ ಮಂದಿರ ನಿರ್ಮಾಣಕ್ಕೂ ಅವಕಾಶ ನೀಡುವುದಿಲ್ಲ. ಶಾಖೆಗಳನ್ನೂ ನಡೆಸುವುದಕ್ಕೆ ಬಿಡುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.