ದೇಶ

ಯಾವುದೇ ಸವಾಲು ಎದುರಿಸಲು ಭಾರತ ಸಿದ್ಧ: ವಾಯುಪಡೆ ಮುಖ್ಯಸ್ಥ

Lingaraj Badiger
ನವದೆಹಲಿ: ಭಾರತೀಯ ವಾಯುಪಡೆ ತುಂಬಾ ಜಾಗೃತವಾಗಿದ್ದು, ಇಂಡೋ ಪೆಸಿಫಿಕ್ ಪ್ರದೇಶದಲ್ಲಿ ಉದ್ಭವಿಸುವ ಯಾವುದೇ ಬೆದರಿಕೆಗಳನ್ನು ಎದುರಿಸಲು ಸಮರ್ಥವಾಗಿದೆ ಎಂದು ವಾಯುಪಡೆ ಮುಖ್ಯಸ್ಥ ಬಿಎಸ್ ಧನೋವಾ ಅವರು ಭಾನುವಾರ ಹೇಳಿದ್ದಾರೆ.
ರಾಷ್ಟ್ರೀಯ ಹಿತಾಸಕ್ತಿ ರಕ್ಷಿಸಲು ಭಾರತೀಯ ವಾಯುಪಡೆ ಯಾವುದೇ ಸವಾಲುಗಳನ್ನು ಎದುರಿಸಲು ಸಂಪೂರ್ಣ ಸಿದ್ಧವಿದೆ ಎಂದು ಧನೋವಾ ಅವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
ನೆರೆಹೊರೆಯ ರಾಷ್ಟ್ರಗಳು ಸೇನೆಯನ್ನು ಆಧುನಿಕರಣಗೊಳಿಸುತ್ತಿರುವುದು ಮತ್ತು ಹೊಸ ಉಪಕರಣಗಳನ್ನು ಸೇನೆಗೆ ಸೇರ್ಪಡೆ ಮಾಡುತ್ತಿರುವುದು ಕಳವಳಕಾರಿ ವಿಷಯ ಎಂದಿರುವ ಧನೋವಾ ಅವರು, ಆದರೂ ಭಾರತದ ವಾಯುಪಡೆ ಯಾವುದೇ ಬೆದರಿಕೆಯನ್ನು ಪರಿಣಾಮಕಾರಿಯಾಗಿ ಎದುರಿಸುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದ್ದಾರೆ.
ಪ್ರಸ್ತುತ ಸವಾಲುಗಳು ಬಗೆಹರಿಸಲಾಗದ ಪ್ರಾದೇಶಿಕ ಸಮಸ್ಯೆಗಳಿಂದ ಹೊರಹೊಮ್ಮುತ್ತಿದ್ದು, ಯಾವುದೇ ಪ್ರಾಯೋಜಿತ ಅಥವಾ ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ನಡೆಯುವ ದಾಳಿಯನ್ನು ಎದುರಿಸಲು ಸಿದ್ಧ ಎಂದು ನೇರವಾಗಿ ಚೀನಾ ಮತ್ತು ಪಾಕಿಸ್ತಾನದ ಬೆದರಿಕೆಯನ್ನು ಪ್ರಸ್ತಾಪಿಸದೆ ಧನೋವಾ ಹೇಳಿದ್ದಾರೆ. 
SCROLL FOR NEXT