ಚತ್ತೀಸ್ ಗಢ ವಿಧಾನಸಭಾ ಚುನಾವಣೆ: ಶೇ.58 ರಷ್ಟು ಮತದಾನದೊಂದಿಗೆ ಮೊದಲ ಹಂತ ಮುಕ್ತಾಯ
ರಾಯ್ಪುರ: ಚತ್ತೀಸ್ ಗಢ ವಿಧಾನಸಭಾ ಚುನಾವಣೆಗೆ ನ.12 ರಂದು ನಡೆದ ಮೊದಲ ಹಂತದ ಮತದಾನ ಮುಕ್ತಾಯಗೊಂಡಿದ್ದು ಶೇ.70 ರಷ್ಟು ಮತದಾನವಾಗಿದೆ.
ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದಾಖಲೆಯ ಪ್ರಮಾಣದ ಮತದಾನ ನಡೆದಿರುವುದು ಈ ಬಾರಿಯ ಚುನಾವಣೆಯ ವಿಶೇಷತೆಯಾಗಿದೆ. ದಾಂತೇವಾಡದಲ್ಲಿ ಶೇ.48 ರಷ್ಟು ಮತದಾನವಾಗಿದ್ದು, ನಕ್ಸಲ್ ಪೀಡಿತ ಪ್ರದೇಶವಾದ ಬಸ್ತಾರ್ ಜಿಲ್ಲೆಯಲ್ಲಿ ಶೇ.58 ರಷ್ಟು ಮತದಾನ ನಡೆದಿದೆ. ಮೊದಲ ಹಂತದ ಚುನಾವಣೆಯಲ್ಲಿ ನಕ್ಸಲ್ ಪೀಡಿತ 8 ಜಿಲ್ಲೆಗಳ 18 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆದಿದೆ.
ಚುನಾವಣಾ ಪ್ರಕ್ರಿಯೆ ಹಾಳುಗೆಡಲು ಕಳೆದ 15 ದಿನಗಳಲ್ಲಿ ನಕ್ಸಲರು ಸಾಕಷ್ಟು ದಾಳಿಗಳನ್ನು ನಡೆಸಿ 13 ಮಂದಿಯನ್ನು ಬಲಿ ಪಡೆದಿದ್ದರು. ಆದರೆ, ಡ್ರೋನ್ ಕ್ಯಾಮೆರಾ ನಿಯೋಜಿಸಿ, ನಕ್ಸಲರ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇಡಲಾಗಿದ್ದ ಪರಿಣಾಮ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಹೆಚ್ಚಿನ ಹಾನಿ ಸಂಭವಿಸದೇ ಉತ್ತಮ ಪ್ರಮಾಣದಲ್ಲಿ ಮತದಾನ ನಡೆದಿದೆ.