ನಾಗ್ಪುರ(ಮಹಾರಾಷ್ಟ್ರ): ವೀಡಿಯೋ ಗೇಮ್ ಚಟವಿದ್ದ ಓರ್ವ ಬಾಲಕನಿಂದ ಆಕೆಯ ತಾಯಿ ಮೊಬೈಲ್ ಫೋನ್ ಕಸಿದುಕೊಂಡ ಕಾರಣ 14 ವರ್ಷದ ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
ನಾಗ್ಪುರದ ಮನ್ಹಾಲ್ ಪ್ರದೇಶದಲ್ಲಿ ತನ್ನ ಸೋದರಿ ಹಾಗೂ ತಾಯಿ ಜತೆ ಬಾಡಿಗೆ ಮನೆಯಲ್ಲಿ ವಾಸವಿದ್ದ ಕ್ರಿಶ್ ಸುನಿಲ್ ಲುನಾವತ್ ಎಂಬ ಬಾಲಕ ನೇಣಿಗೆ ಶರಣಾದ ದುರ್ದೈವಿ. ಈತ ಮೊಬೈಲ್ ಫೋನ್ ನಲ್ಲಿ ಗಂಟೆ ಗಟ್ಟಲೆ ವೀಡಿಯೋ ಗೇಮ್ ಆಟವಾಡುತ್ತಿದ್ದ.. ಇದನ್ನೇ ಚಟವಾಗಿಸಿಕೊಂಡಿದ್ದ ಎಂದು ಪೋಲೀಸರು ಹೇಳಿದ್ದಾರೆ.
ಇನ್ನು ಬಾಲಕ ಸುಮಾರು ಒಂದು ವರ್ಷದಿಂದ ಶಾಲೆಗೆ ಹೋಗುವುದನ್ನು ಸಹ ನಿಲ್ಲಿಸಿದ್ದ. ಈತನ ತಾಯಿ ಹಾಗೂ ಸೋದರಿ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ದಿನದ ಬಹುಪಾಲು ವೇಳೆ ಈತ ಮನೆಯಲ್ಲಿ ಒಂಟಿಯಾಗಿಯೇ ಇರುತ್ತಿದ್ದನೆನ್ನಲಾಗಿದೆ.
ಬಾಲಕ ಇತ್ತೀಚೆಗೆ ವೀಡಿಯೋ ಗೇಮ್ ಆಡುವುದಕ್ಕಾಗಿ ಹೊಸ ಪ್ಲೇಸ್ಟೇಷನ್ ಗೇಮಿಂಗ್ ಡಿವೈಸ್ ಖರೀದಿಸುವಂತೆ ತಾಯಿ ಬಳಿ ಒತ್ತಾಯಿಸಿದ್ದ. ಸೋಮವಾರ ಆತನ ತಾಯಿ ಮುಂಬೈಗೆ ಹೊರಟಾಗ ಅವನಲ್ಲಿದ್ದ ಮೊಬೈಲ್ ಅನ್ನು ಕೊಡುವಂತೆ ಕೇಳಿದ್ದಾರೆ. ಆಗ ಬಾಲಕ ಕ್ರಿಶ್ ತಾನು ಮೊಬೈಲ್ ನೀಡಲು ಒಪ್ಪದೆ ಹೋದಾಗ ತಾಯಿ ಆತನಿಂದ ಬಲವಂತವಾಗಿ ಮೊಬೈಲ್ ಕಿತ್ತುಕೊಂಡು ಮುಂಬೈಗೆ ತೆರಳಿದ್ದಾರೆ.
ಇದರಿಂದ ಖಿನ್ನನಾದ ಬಾಲಕ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಕೋಟ್ವಾಲಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಉಮೇಶ್ ಬೆಸರ್ಕಾರ್ ಹೇಳಿದ್ದಾರೆ.
ಇದೀಗ ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಅಳಿಸಲಾಗಿದ್ದು ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಾಲ್ಗಿದೆ.