ದೇಶ

ತಮಿಳುನಾಡು: 2 ಸಾವಿರ ರೂ.ಸಾಲ ಹಿಂತಿರುಗಿಸಲು ಐದು ವರ್ಷ ಜೀತದಾಳಾಗಿ ದುಡಿದ ಬಾಲಕ

Nagaraja AB

ವೆಲ್ಲೂರು: ತಂದೆ ಮಾಡಿದ 2 ಸಾವಿರ ರೂಪಾಯಿ ಸಾಲ ಹಿಂತಿರುಗಿಸಲು  9 ವರ್ಷದ ಬಾಲಕನೊಬ್ಬ ಐದು ವರ್ಷಗಳ ಕಾಲ ಜೀತದಾಳಾಗಿ  ದುಡಿದಿರುವ ಅಮಾನವೀಯ ಘಟನೆ ತಮಿಳುನಾಡಿನ ವೆಲ್ಲೂರು ಬಳಿ ನಡೆದಿದೆ.

ಅರುಲ್ ಕುಮಾರ್  ಎಂಬ ಬಾಲಕ ಐದು ವರ್ಷದವನಾಗಿದ್ದಾಗ ಆತನ ತಂದೆ ಶರವಣ 2 ಸಾವಿರ ರೂಪಾಯಿಗಾಗಿ ಜೀತದಾಳಾಗಿ ಬಲವಂತವಾಗಿ ಕೆಲಸಕ್ಕೆ ಸೇರಿಸಿದ್ದಾನೆ. ಎರಡು  ವರ್ಷದ ನಂತರ ಸಾಲ ಹಿಂತಿರುಗಿಸದೆ ಆತ ಮೃತಪಟ್ಟಿದ್ದು, ಆ ಬಾಲಕ  ಈವರೆಗೂ ಜೀತದಾಳು ಆಗಿಯೇ ಜೀವ ಸವೆಸುತ್ತಿದ್ದ.

ಐದು ವರ್ಷ ದುಡಿದ ನಂತರ  9 ವರ್ಷದ ಬುಡಕಟ್ಟು ಸಮುದಾಯದ ಬಾಲಕನನ್ನು ರಕ್ಷಿಸಲಾಗಿದ್ದು, ನವೆಂಬರ್ 14 ರಂದು ತಿರುಪತ್ತೂರಿನ ಸರ್ಕಾರಿ ವಸತಿ ಶಾಲೆಗೆ ಸೇರಿಸಲಾಗಿದೆ.

ಬುಡಕಟ್ಟು ಜನರ ಬಗ್ಗೆ ಸರ್ವೇ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಆದಿವಾಸಿ ಸಮಿತಿಯ ತಂಡವೊಂದು ಅರುಲ್  ತಾಯಿ ಭೇಟಿ ಮಾಡಿದ್ದು,  ಆತ ಕೃಷ್ಣಗಿರಿ ಜಿಲ್ಲೆಯಲ್ಲಿ ಕೆಲಸ ಮಾಡುತಿರುವ ಬಗ್ಗೆ  ಮಾಹಿತಿ ಪಡೆದುಕೊಂಡಿತು ಎಂದು  ಸುಸ್ಥಿರ ಅಭಿವೃದ್ಧಿ ಫೌಂಡೇಷನ್  ಕಾರ್ಯಕಾರಿ ನಿರ್ದೇಶಕ ಕೆ. ಕೃಷ್ಣನ್ ಹೇಳಿದರು.

ಅರುಲ್ ಪತ್ತೆಗಾಗಿ ಆರು ತಿಂಗಳ ಹಿಂದೆಯೇ ಶೋಧ ಕಾರ್ಯಾಚರಣೆ ಆರಂಭಿಸಲಾಗಿತಾದರೂ ಪೊಲೀಸ್,  ಕಂದಾಯ ಇಲಾಖೆ ಅಧಿಕಾರಿಗಳನ್ನೊಳಗೊಂಡ ತಂಡದಿಂದ ವಾರದ ಹಿಂದಷ್ಟೇ ಆತನನ್ನು ಪತ್ತೆ ಮಾಡಿ ತಿರುಪತ್ತೂರು ಉಪ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರುಪಡಿಸಲಾಯಿತು ಎಂದು ಅವರು ತಿಳಿಸಿದ್ದಾರೆ.

ಅರುಲ್ ನಿಂದ ಕೆಲಸ ಮಾಡಿಸಿಕೊಳ್ಳುತ್ತಿದ್ದ  ಮಾಲೀಕ ಬಾಬು ವಿರುದ್ಧ  ಜೀತದಾಳು ರದ್ದು ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಕಂದಾಯ ವಿಭಾಗೀಯ ಅಧಿಕಾರಿ ಎನ್, ಶರವಣ ತಿಳಿಸಿದ್ದಾರೆ.
ಅರುಲ್ ನನ್ನು ಸರ್ಕಾರಿ ವಸತಿ ಶಾಲೆಗೆ ಸೇರಿಸಲಾಗಿದ್ದು, ದಾಖಲಾತಿಗಳು ಹಾಗೂ ಸಮವಸ್ತ್ರವನ್ನು ನೀಡಲಾಗಿದೆ. ಬಾಬು ವಿರುದ್ಧ ಬಾಲ ಕಾರ್ಮಿಕ ನಿರ್ಭಂದ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಮುಂದುವರೆದಿದೆ.
SCROLL FOR NEXT