ದೇಶ

ಬಿಹಾರ್ ಮಾಜಿ ಸಚಿವೆ ಮಂಜು ವರ್ಮಾ ಆಸ್ತಿ ಜಪ್ತಿಗೆ ಕೋರ್ಟ್ ಆದೇಶ

Lingaraj Badiger
ನವದೆಹಲಿ: ಮುಜಾಫರಪುರ್ ಶೆಲ್ಟರ್ ಹೋಮ್ ಸೆಕ್ಸ್ ಹಗರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಬಿಹಾರ ಮಾಜಿ ಸಚಿವೆ ಮಂಜು ವರ್ಮಾ ಅವರ ಆಸ್ತಿ ಜಪ್ತಿ ಮಾಡುವಂತೆ ಬಿಹಾರದ ಬೆಗುಸರಾಯಿ ಕೋರ್ಟ್ ಶುಕ್ರವಾರ ಆದೇಶಿಸಿದೆ.
ತಲೆಮರೆಸಿಕೊಂಡಿರುವ ಬಿಹಾರ ಮಾಜಿ ಸಚಿವೆಯನ್ನು ಬಂಧಿಸಿದ ಬಿಹಾರ ಪೊಲೀಸರಿಗೆ ಇತ್ತೀಚಿಗೆ ಸುಪ್ರೀಂ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಇದರ ಬೆನ್ನಲ್ಲೇ ಜೆಡಿಯು ಮಂಜು ಶರ್ಮಾ ಅವರನ್ನು ಪಕ್ಷದಿಂದಲೇ ಉಚ್ಚಾಟಿಸಿತ್ತು.
ಮಂಜು ವರ್ಮಾ ಅವರನ್ನು ಒಂದು ತಿಂಗಳಿಂದ ಪತ್ತೆಹಚ್ಚಲು ಸಾಧ್ಯವಾಗಿಲ್ಲ ಎಂಬುದನ್ನು ಕೇಳಿ ನಮಗೆ ಶಾಕ್​ ಆಗಿದೆ. ಪ್ರಮುಖ ವ್ಯಕ್ತಿಯೊಬ್ಬರನ್ನು ಪತ್ತೆ ಹಚ್ಚಲು ಏಕೆ ಸಾಧ್ಯವಾಗುತ್ತಿಲ್ಲ ಎಂಬುದರ ಬಗ್ಗೆ ಪೊಲೀಸ್​ ಇಲಾಖೆ ನ್ಯಾಯಾಲಯದ ಮುಂದೆ ಬಂದು ಸ್ಪಷ್ಟೀಕರಣ ನೀಡಬೇಕು. ಮುಂದಿನ ವಿಚಾರಣೆಗೆ ಪೊಲೀಸ್​ ಮಹಾ ನಿರ್ದೇಶಕರು ನ್ಯಾಯಾಲಯದ ಮುಂದೆ ಹಾಜರಾಗಬೇಕು ಎಂದು ತಾಕೀತು ಮಾಡಿದ ಸುಪ್ರೀಂ ಕೋರ್ಟ್, ವಿಚಾರಣೆಯನ್ನು ನ.27ಕ್ಕೆ ಮುಂದೂಡಿದೆ.
ಶೆಲ್ಟರ್​ ಹೋಮ್​ ಸೆಕ್ಸ್ ಹಗರಣದಲ್ಲಿ ತಮ್ಮ ಪತಿಯ ಪಾತ್ರವಿರುವ ಹಿನ್ನೆಲೆಯಲ್ಲಿ ಮಂಜು ವರ್ಮಾ ಅವರು ಕೆಲ ತಿಂಗಳ ಹಿಂದೆ ಸಚಿವ ಸ್ಥಾನಕ್ಕೆ ರಾಜೀನಾಮೆಯನ್ನೂ ಸಲ್ಲಿಸಿದ್ದರು.
ತನಿಖೆಗೆಂದು ಸಿಬಿಐ ಅಧಿಕಾರಿಗಳು ಮಂಜು ವರ್ಮಾ ಅವರ ಪಾಟ್ನಾ ಮತ್ತು ಬೇಗುಸರಾಯಿ ನಿವಾಸದ ಮೇಲೆ ದಾಳಿ ನಡೆಸಿದಾಗ ಅವರ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರಗಳು ಪತ್ತೆಯಾಗಿದ್ದವು. ಈ ವಿಚಾರವಾಗಿ ಮಂಜು ವರ್ಮಾ ಅವರನ್ನು ಬಂಧಿಸಿ ಕರೆತರುವಂತೆ ಸುಪ್ರೀಂಕೋರ್ಟ್​ ಬಿಹಾರ ಪೊಲೀಸರಿಗೆ ಸೂಚನೆ ನೀಡಿದೆ. ಆದರೆ, ಅವರ ಪತ್ತೆಗಾಗಿ ತಿಂಗಳಿಂದ ಪ್ರಯತ್ನಿಸುತ್ತಿರುವ ಪೊಲೀಸರು ಆ ಕಾರ್ಯದಲ್ಲಿ ವಿಫಲರಾಗಿದ್ದಾರೆ.
SCROLL FOR NEXT