ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿ ಗೋಧಿ ಬೆಳೆಯುತ್ತಿರುವುದನ್ನು ಎಂದಾದರೂ ನೋಡಿದ್ದೀರಾ ಮೋದಿ ಜೀ?
ನವದೆಹಲಿ: ಚತ್ತೀಸ್ ಗಢ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ನೋಟು ನಿಷೇಧದ ವಿಚಾರವನ್ನೇ ಪ್ರಸ್ತಾಪಿಸಿ ಪ್ರಧಾನಿ ವಿರುದ್ಧ ಮಾತನಾಡಿರುವ ರಾಹುಲ್ ಗಾಂಧಿ, ನೋಟು ನಿಷೇಧದ ಅಸ್ತ್ರ ಬಳಸಿ ಪ್ರಧಾನಿ ನರೇಂದ್ರ ಮೋದಿ ರೈತರ ಬಳಿ ಇದ್ದ ಹಣವನ್ನೆಲ್ಲಾ ತೆಗೆದು ಸುಸ್ತಿದಾರರಾಗಿರುವ ಸ್ನೇಹಿತರಾದ ವಿಜಯ್ ಮಲ್ಯ, ಮೆಹುಲ್ ಚೋಕ್ಸಿ, ನೀರವ್ ಮೋದಿಗೆ ನೀಡಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಟ್ವಿಟರ್ ನಲ್ಲಿ ಮೋದಿ ವಿರುದ್ಧ ಗಂಭೀರ ಆರೋಪ ಮಾಡಿರುವ ರಾಹುಲ್ ಗಾಂಧಿ, ಮಲ್ಯ, ಚೋಕ್ಸಿ, ನೀರವ್ ಮೋದಿ ಅವರ್ಯಾದರೂ ಎಂದಾದರೂ ಗೋಧಿ ಬೆಳೆಯುವುದನ್ನು ಕಂಡಿದ್ದೀರಾ ಮೋದಿ ಜೀ..? ರೈತರಿಗೆ ಅವಮಾನ ಮಾಡಬೇಡಿ, ನೋಟು ನಿಷೇಧದ ನಂತರ ನೀವು ರೈತರ ಬಳಿ ಇದ್ದ ಹಣವನ್ನು ತೆಗೆದು ಸುಸ್ತಿದಾರ ಸ್ನೇಹಿತರಿಗೆ ಕೊಟ್ಟಿದ್ದೀರಾ, ರೈತರಿಗೆ ಈ ರೀತಿ ಅಪಮಾನ ಮಾಡಬೇಡಿ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಇದಕ್ಕೂ ಮುನ್ನ ಚತ್ತೀಸ್ ಗಢ ವಿಷಯದಲ್ಲಿ ಬಿಜೆಪಿ ವಿರುದ್ಧ ಕಿಡಿ ಕಾರಿದ್ದ ರಾಹುಲ್ ಗಾಂಧಿ, ಬಿಜೆಪಿ ಈಗ 2 ಚತ್ತೀಸ್ ಗಢಗಳನ್ನು ಸೃಷ್ಟಿಸಿದೆ. ಒಂದು ಶ್ರೀಮಂತರಿಗಾಗಿ ಇರುವ ಚತ್ತೀಸ್ ಗಢ, ಮತ್ತೊಂದು ಬಡವರಿಗಾಗಿ ಇರುವ ಚತ್ತೀಸ್ ಗಢ ನಮಗೆ ಎರಡು ಚತ್ತೀಸ್ ಗಢಗಳು ಬೇಡ ನಮಗೆ ನ್ಯಾಯ ಬೇಕು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.