ದೇಶ

ಹೆಚ್ಚುವರಿ ಹಣ ಪಡೆಯಲು ಆರ್ ಬಿಐ ಕಾಯ್ದೆಗೆ ತಿದ್ದುಪಡಿ ತರಲು ಕೇಂದ್ರ ಸರ್ಕಾರ ಮುಂದು?

Sumana Upadhyaya

ಹೈದರಾಬಾದ್:  ಇತ್ತೀಚೆಗೆ ವ್ಯಾಪಕ ಸುದ್ದಿಯಾಗಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ-ಹಣಕಾಸು ಸಚಿವಾಲಯದ ನಡುವಿನ ನಿಲುವಿನ ಮಧ್ಯೆ, 1934ರ ಆರ್ ಬಿಐ ಕಾಯ್ದೆಯನ್ನು ಸರ್ಕಾರ ಬದಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಇದುವರೆಗೆ ಕಾಯ್ದೆ 19 ಬಾರಿ ತಿದ್ದುಪಡಿಯನ್ನು ಕಂಡಿದ್ದರೂ ಮೀಸಲು ಮತ್ತು ಹೆಚ್ಚುವರಿ ಲಾಭ ವರ್ಗಾವಣೆಗೆ ಸಂಬಂಧಪಟ್ಟ ವಿಭಾಗ ಆರ್ ಬಿಐಯ 84 ವರ್ಷಗಳ ಇತಿಹಾಸದಲ್ಲಿ ಯಾವುದೇ ಬದಲಾವಣೆ ಕಂಡಿರಲಿಲ್ಲ.

ಅದಕ್ಕೀಗ ಬದಲಾವಣೆಯ ಗಾಳಿ ಬೀಸುವ ಸಾಧ್ಯತೆಯಿದೆ. ಪ್ರತಿವರ್ಷ ಮೀಸಲಿಗೆ ಲಾಭದ ಕೆಲವು ಮೊತ್ತವನ್ನು ಆರ್ ಬಿಐ ವರ್ಗಾಯಿಸಬೇಕಾಗಿದ್ದು ಈ ಬಗ್ಗೆ ನಿರ್ಧರಿಸಲು ಸರ್ಕಾರ ಆರ್ಥಿಕ ಚೌಕಟ್ಟನ್ನು ಪ್ರಸ್ತಾಪಿಸಲಿದೆ. ಸದ್ಯಕ್ಕೆ ಬೇರೆ ಕೇಂದ್ರೀಯ ಬ್ಯಾಂಕ್ ಗಳಂತೆ ಯಾವುದೇ ಪೂರ್ವ ನಿರ್ಧರಿತ ಲಾಭ ಹಂಚಿಕೆ ಸೂತ್ರಗಳಿಲ್ಲ. ಲಾಭಗಳನ್ನು ವಿನಿಯೋಗಿಸುವ ಪರಿಕಲ್ಪನೆಯನ್ನು ಅಧಿಕೃತಗೊಳಿಸುವ ಮತ್ತು ಅದಕ್ಕೆ ತಕ್ಕಂತೆ ಕಾಯ್ದೆ ತಿದ್ದುಪಡಿ ಮಾಡುವುದು ಸಮಂಜಸವಾಗಿರುತ್ತದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಬರುವ ಸೋಮವಾರ ಆರ್ ಬಿಐ ಮಂಡಳಿ ಸಭೆ ನಡೆಯಲಿದೆ. ಮೀಸಲು ಖಾತೆಗಳಿಗೆ ವರ್ಗಾವಣೆ ಮಾಡುವ ಲಾಭದ ಶೇಕಡಾ ಮೊತ್ತದ ಬಗ್ಗೆ ನಿರ್ಧರಿಸಲು ತಾಂತ್ರಿಕ ಸಮಿತಿಯನ್ನು ರಚಿಸುವ ಸಾಧ್ಯತೆಯಿದೆ. ಕಳೆದ ಎರಡು ದಶಕದಿಂದೀಚೆಗೆ ಇಂತಹ ಎರಡು ಸಮಿತಿಗಳನ್ನು ರಚಿಸಲಾಗಿದ್ದು ಅವುಗಳು ವೈರುಧ್ಯ ಸಲಹೆಗಳನ್ನು ನೀಡಿದ್ದವು. ಆದರೆ ಅವುಗಳನ್ನು ಜಾರಿಗೊಳಿಸಿರಲಿಲ್ಲ.

SCROLL FOR NEXT