ದೇಶ

ಸಿಎಜಿ ಶೀಘ್ರದಲ್ಲಿಯೇ ಜಿಎಸ್ ಟಿ ಕಾರ್ಯಕ್ಷಮತೆ ಅಡಿಟ್ ವರದಿ ಅಂತಿಮಗೊಳಿಸುವ ಸಾಧ್ಯತೆ

Nagaraja AB

ನವದೆಹಲಿ:  ಭಾರತೀಯ ಲೆಕ್ಕ ಮಹಾನಿರ್ದೇಶಕರು ಹಾಗೂ ನಿಯಂತ್ರಕರು (ಸಿಎಜಿ)  ಶೀಘ್ರದಲ್ಲಿಯೇ  ಜಿಎಸ್ ಟಿ ಕಾರ್ಯಕ್ಷಮತೆ ಅಡಿಟ್ ವರದಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ಡಿಸೆಂಬರ್ 11 ರಿಂದ ಚಳಿಗಾಲದ  ಅಧಿವೇಶನ ಆರಂಭವಾಗಲಿದ್ದು, ಅದಕ್ಕೂ ಮುಂಚಿತವಾಗಿ ಜಿಎಸ್ ಟಿ ಕಾರ್ಯಕ್ಷಮತೆ ವರದಿ ಸಂಸತ್ತಿನಲ್ಲಿ ಮಂಡನೆಯಾಗುವ ನಿರೀಕ್ಷೆಯಿದೆ.

ಜುಲೈ.1 2017ರಿಂದ ನೂತನ ಪರೋಕ್ಷ ತೆರಿಗೆ ಜಿಎಸ್ ಟಿ  ಜಾರಿಯಾಗಿದ್ದು, ಆಗಿನಿಂದಲೂ ಈವರೆಗಿನ ಕಾರ್ಯಕ್ಷಮತೆಯನ್ನು ಸಿಎಜಿ ಪರಿಶೀಲನೆ ನಡೆಸುತ್ತಿದೆ.

ಜಿಎಸ್ ಟಿ ನೋಂದಣಿ, ಮರುಪಾವತಿ,  ಪರಿವರ್ತನೆ ಕ್ರೆಡಿಟ್ ಯಾಂತ್ರಿಕತೆ,  ಸುಲಭ ತೆರಿಗೆ ಪಾವತಿ, ಜಿಎಸ್ ಟಿಯಿಂದ ಆರ್ಥಿಕ ಚಟುವಟಿಕೆ ಮೇಲೆ ಪರಿಣಾಮ ಮತ್ತಿತರ ಅಂಶಗಳ ಮೇಲೆ ಸಿಎಜಿ ವರದಿಯನ್ನು ಅಂತಿಮಗೊಳಿಸಲಿದೆ.

 ಜಿಎಸ್ ಟಿ ವ್ಯವಸ್ಥೆ ಬಗ್ಗೆ ಪರಿಪೂರ್ಣ ಮಾಹಿತಿ ಪಡೆಯುವ ನಿಟ್ಟಿನಲ್ಲಿ ಸಿಎಜಿ ತಂಡ ಈಗಾಗಲೇ  ದೊಡ್ಡ ನಗರಗಳ ಜಿಎಸ್ ಟಿ ಆಯುಕ್ತಾಲಯಕ್ಕೆ ಭೇಟಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಆದಾಯ ಸಂಗ್ರಹ ಅಂಶವನ್ನು ಕಾರ್ಯಕ್ಷಮತಾ ವರದಿಯಲ್ಲಿ ಪರಿಗಣಿಸುತ್ತಿಲ್ಲ. 17 ಸ್ಥಳೀಯ ತೆರಿಗೆಗಳನ್ನೊಳಗೊಂಡಿರುವ ಜಿಎಸ್ ಟಿ ಅನುಷ್ಠಾನದ ಬಗ್ಗೆ ಪ್ರಾಥಮಿಕವಾಗಿ ಬೆಳಕು ಚೆಲ್ಲಲಾಗುತ್ತಿದೆ. ಜಿಎಸ್ ಟಿ ಸ್ವಾತಂತ್ರ ಭಾರತದ ಅತಿದೊಡ್ಡ ತೆರಿಗೆ ಸುಧಾರಣೆ ಎಂದು ಕರೆಯಲಾಗುತ್ತಿದ್ದು, ಆರಂಭದ ತಿಂಗಳಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಬೇಕಾಗಿತ್ತು.

ಕಳೆದ ಆರ್ಥಿಕ ವರ್ಷದಲ್ಲಿ ಜಿಎಸ್ ಟಿಯಿಂದ 89, 885 ಕೋಟಿ ರೂ. ತಿಂಗಳ ಸರಾಸರಿ ಆದಾಯ ಸಂಗ್ರಹಣೆಯಾಗಿದೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಏಪ್ರಿಲ್ ವೇಳೆಗೆ 1.03 ಲಕ್ಷ ಕೋಟಿ, ಅಕ್ಟೋಬರ್ ವೇಳೆಗೆ 1 ಲಕ್ಷ ಕೋಟಿ ಜಿಎಸ್ ಟಿ ಆದಾಯ ಸಂಗ್ರಹವಾಗಿದೆ.

SCROLL FOR NEXT