ನವದೆಹಲಿ: ಸಿಬಿಐ ನ ವಿಶೇಷ ನಿರ್ದೇಶಕ ರಾಕೇಶ್ ಆಸ್ತಾನ ವಿರುದ್ಧದ ತನಿಖೆಯಲ್ಲಿ ಮತ್ತೊಂದು ತಿರುವು ಸಿಕ್ಕಿದ್ದು, ತನಿಖೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಸ್ತಕ್ಷೇಪ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.
ರಾಕೇಶ್ ಆಸ್ತಾನ ಅವರ ವಿರುದ್ಧ ದಾಖಲಾಗಿದ್ದ ಎಫ್ಐಆರ್ ಕುರಿತು ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿ ಮನೀಷ್ ಕುಮಾರ್ ಸಿನ್ಹಾ, ಸುಪ್ರೀಂ ಕೋರ್ಟ್ ಎದುರು ಹೇಳಿಕೆ ನೀಡಿದ್ದು, ಸಿಬಿಐ ನ 2ನೇ ಸ್ಥಾನದಲ್ಲಿರುವ ರಾಕೇಶ್ ಆಸ್ತಾನ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರದ ಪ್ರಕರಣದ ತನಿಖೆಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಪ್ರಭಾವ ಬೀರಲು ಯತ್ನಿಸಿದ್ದರು ಎಂದಿದ್ದಾರೆ.
ಇದೇ ವೇಳೆ ಕೋರ್ಟ್ ಗೆ ಸಲ್ಲಿಸಲಾಗಿರುವ ಅರ್ಜಿಯಲ್ಲಿ, ತಮ್ಮನ್ನು ನಾಗ್ಪುರಕ್ಕೆ ವರ್ಗಾವಣೆ ಮಾಡಿರುವುದನ್ನು ಪ್ರಶ್ನಿಸಿರುವ ಸಿನ್ಹಾ, ರಾಕೇಶ್ ಆಸ್ತಾನ ಪ್ರಕರಣದಲ್ಲಿ ಅಜಿತ್ ದೋವಲ್ ಹಸ್ತಕ್ಷೇಪ ಮಾಡಿದ್ದಾರೆ, ಪ್ರಕರಣದ ಸಂಬಂಧ ತನಿಖೆಯ ದೃಷ್ಟಿಯಿಂದಾಗಿ ಮಹತ್ವ ಪಡೆದುಕೊಂಡಿದ್ದ ಶೋಧ ಕಾರ್ಯಾಚಾರಣೆಗೆ ಅಜಿತ್ ದೋವಲ್ ಅನುವು ಮಾಡಿಕೊಟ್ಟಿಲ್ಲ. ಜೊತೆಗೆ ನೀರವ್ ಮೋದಿ ವಿರುದ್ಧದ ತನಿಖೆಯಲ್ಲೂ ಸಹ ಅಜಿತ್ ದೋವಲ್ ಹಸ್ತಕ್ಷೇಪ ಮಾಡಿದ್ದಾರೆ ಎಂದು ಸಿನ್ಹಾ ಆರೋಪಿಸಿದ್ದಾರೆ.
ಕೇಂದ್ರ ಸಚಿವ ಸಂಪುಟದ ರಾಜ್ಯಖಾತೆ ಸಚಿವರು ಹಣ ಪಡೆದು ತನಿಖೆ ಎದುರಿಸುತ್ತಿದ್ದ ಉದ್ಯಮಿಯಿಂದ ಹಣ ಪಡೆದು ತನಿಖೆಯಲ್ಲಿ ಸಹಾಯ ಮಾಡಲು ಭರವಸೆ ನೀಡಿದ್ದರು, ಈ ಸಂಬಂಧ ಇರುವ ಹಲವು ದಾಖಲೆಗಳು ಕೋರ್ಟ್ ಗೆ ಅಚ್ಚರಿ ಮೂಡಿಸಲಿವೆ ಎಂದು ಸಿನ್ಹಾ ಹೇಳಿದ್ದಾರೆ.