ಚೆನ್ನೈ ಬಂದರಿನಲ್ಲಿ ತೈಲ ಸೋರಿಕೆ
ಚೆನ್ನೈ: ಕಳೆದ ವರ್ಷ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಚೆನ್ನೈ ತೈಲ ಸೋರಿಕೆ ಪ್ರಕರಣ ಮತ್ತೆ ನೆನಪಾಗಿದ್ದು, ಚೆನ್ನೈ ಬಂದರಿನ ಉತ್ತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿ ಆತಂಕ ಮೂಡಿಸಿದೆ.
ಚೆನ್ನೈ ಬಂದರಿನ ಉತ್ತರ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿದ್ದು, ಸುಮಾರು ಎರಡು ಟನ್ ನಷ್ಟು ಕಚ್ಛಾ ತೈಲ ಸಮುದ್ರದ ಪಾಲಾಗಿದೆ. ಚೆನ್ನೈನಿಂದ ಸುಮಾರು 20 ಕಿಲೋಮೀಟರ್ ದೂರದ ಎನ್ನೋರ್‌ನ ಕಾಮರಾಜರ್ ಬಂದರಿನಲ್ಲಿ ಈ ಘಟನೆ ನಡೆದಿದ್ದು, ತೈಲ ವರ್ಗಾವಣೆಯ ಪೈಪ್ ಒಡೆದ ಹಿನ್ನೆಲೆಯಲ್ಲಿ ಭಾನುವಾರ ಈ ದುರಂತ ಸಂಭವಿಸಿದ್ದು, ಎಂಟಿ ಕೊರಲ್ ಸ್ಟಾರ್ಸ್ ಎಂಬ ಟ್ಯಾಂಕರ್ ನಿಂದ ಈ ತೈಲ ಸೋರಿಕೆಯಾಗಿದೆ ಎಂದು ಮೂಲಗಳು ಹೇಳಿವೆ.
ಇನ್ನು ಪ್ರಸ್ತುತ ಸಮುದ್ರಪಾಲಾಗಿರುವ ತೈಲ ಸ್ವಚ್ಛಗೊಳಿಸುವ ಕಾರ್ಯಾಚರಣೆ ನಡೆಯುತ್ತಿದ್ದು, ಇಂದು ಸಂಜೆ ವೇಳೆಗೆ ಇದು ಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಂತೆಯೇ ಭಾರತೀಯ ಕರಾವಳಿ ಕಾವಲು ಪಡೆ ಮತ್ತು ಮರ್ಕೆಂಟೈಲ್ ಮೆರೈನ್ ವಿಭಾಗಗಳು ಪರಿಸ್ಥಿತಿಯ ಮೇಲೆ ನಿಗಾ ಇರಿಸಿವೆ. ಭಾನುವಾರ ಟ್ಯಾಂಕರ್ ನಿಂದ ತೈಲವನ್ನು ವರ್ಗಾವಣೆ ಮಾಡುತ್ತಿದ್ದಾಗ ಪೈಪ್ ಒಡೆದು, ತೈಲ ಸೋರಿಕೆಯಾಗಿದೆ ಎಂದು ಬಂದರಿನ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಪಿ.ರವೀಂದ್ರನ್ ಹೇಳಿದ್ದಾರೆ. ನೀರಿನಲ್ಲಿ ಸೇರಿರುವ ತೈಲ ಸಂಗ್ರಹಿಸಲು ಸ್ಕಿಮ್ಮರ್ ಬಳಸಲಾಗುತ್ತಿದೆ. ಸೋರಿಕೆಯಾದ ತೈಲದಲ್ಲಿ ಶೇಕಡ 80ರಷ್ಟು ಟ್ಯಾಂಕರ್ ನ ಸುತ್ತಲೂ ಇದೆ. ಇನ್ನೂ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಹಾಲಿ ತೈಲ ಸೋರಿಕೆ ಪ್ರಕರಣ ಕಳೆದ ವರ್ಷದ ಘಟನಾವಳಿಯನ್ನು ನೆನಪಿಸಿತಿದ್ದು, ಎರಡು ಸರಕು ಸಾಗಾಟ ಹಡಗುಗಳು ಪರಸ್ಪರ ಢಿಕ್ಕಿ ಹೊಡೆದು ಇದೇ ಪ್ರದೇಶದಲ್ಲಿ 2017ರ ಜನವರಿಯಲ್ಲಿ ಭಾರಿ ಪ್ರಮಾಣದಲ್ಲಿ ತೈಲ ಸೋರಿಕೆಯಾಗಿತ್ತು. ಅದನ್ನು ಸ್ವಚ್ಛಗೊಳಿಸಲು ಮತ್ತು ಪರಿಸರಕ್ಕೆ ಆದ ಹಾನಿಯನ್ನು ತಡೆಯಲು ಸ್ವಯಂ ಸೇವಕ ಕಾರ್ಯಕರ್ತರು ಹರಸಾಹಸ ಪಟ್ಟಿದ್ದರು.