ನವದೆಹಲಿ: ಸಿಬಿಐ ಡಿಐಜಿ ಮನೋಜ್ ಸಿನ್ಹಾ ಅವರು ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ಕೇಂದ್ರ ಸರ್ಕಾರದ ಅಧಿಕಾರಿಗಳ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳು ಕ್ರೈಂ ಥ್ರಿಲ್ಲರ್ ನಂತಿವೆ ಮತ್ತು 'ಚೌಕಿದಾರನೇ ಕಳ್ಳ' ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಂಗಳವಾರ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕ್ರೈಂ ಥ್ರಿಲ್ಲರ್ ಹೆಸರಿನ ಚಿತ್ರದಲ್ಲಿ ದೆಹಲಿಯಿಂದ ಹೊರಗಡೆ ಇರುವ ಚೌಕಿದಾರನೇ ಕಳ್ಳನ ಪಾತ್ರ ಮಾಡುತ್ತಿದ್ದಾರೆ. ಹೊಸ ಸಂಚಿಕೆಯಲ್ಲಿ ಸಿಬಿಐ ಡಿಐಜಿ ಕೇಂದ್ರ ಸಚಿವ, ಎನ್ ಎಸ್ ಎ, ಕಾನೂನು ಇಲಾಖೆ ಕಾರ್ಯದರ್ಶಿ ಮತ್ತು ಸಂಪುಟ ಕಾರ್ಯದರ್ಶಿ ವಿರುದ್ಧ ಗಂಬೀರ ಆರೋಪ ಮಾಡಿದ್ದಾರೆ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ. ಮತ್ತೊಂದು ಕಡೆ ಅವರ ಗುಜರಾತ್ ಪಾಲುದಾರ ಕೋಟಿ ಕೋಟಿ ಹಣ ಸಂಗ್ರಹಿಸುತ್ತಿದ್ದಾರೆ ಎಂದು ರಾಹುಲ್ ಆರೋಪಿಸಿದ್ದಾರೆ.
ಅಧಿಕಾರಿಗಳು ದಣಿದಿದ್ದಾರೆ. ಸರ್ಕಾರ ವಿಶ್ವಾಸ ಕಳೆದುಕೊಂಡಿದೆ ಮತ್ತು ಪ್ರಜಾಪ್ರಭುತ್ವ ನಲಗುತ್ತಿದೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ನಿನ್ನೆ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿದ ಅಫಿಡವಿಟ್ ನಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಕೇಂದ್ರ ಸಚಿವ ಹರಿಭಾಯಿ ಪರ್ಥಿಭಾಯಿ ಚೌಧರಿ ಮತ್ತು ಸಿವಿಸಿ ಕೆವಿ ಚೌಧರಿ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ಸಿಬಿಐ ನಿರ್ದೇಶಕ ರಾಕೇಶ್ ಅಸ್ತಾನ ವಿರುದ್ಧದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಅಜಿತ್ ದೋವಲ್ ಹಾಗೂ ಚೌಧರಿ ಅವರು ತಮ್ಮ ವಿರುದ್ಧದ ಆರೋಪಗಳ ಬಗ್ಗೆ ತಕ್ಷಣಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಕೇಂದ್ರ ಸಚಿವ ಹರಿಭಾಯಿ ಅವರು ತಮ್ಮ ವಿರುದ್ಧದ ಆರೋಪ ಆಧಾರ ರಹಿತಿ ಮತ್ತು ದುರುದ್ದೇಶಪೂರಿತ ಎಂದಿದ್ದಾರೆ.