ನವದೆಹಲಿ: ಸಿಬಿಐ ವಿವಾದಕ್ಕೆ ಸಂಬಂಧಿಸಿದಂತೆ ಸಿಬಿಐ ನಿರ್ದೇಶಕ ಅಲೋಕ್ ವರ್ಮಾ ಅವರು ನೀಡಿದ್ದ ಲಿಖಿತ ಹೇಳಿಕೆ ಮಾಧ್ಯಮಗಳಿಗೆ ಸೋರಿಕೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಸಿಬಿಐ ನಿರ್ದೇಶಕರ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ವಿಚಾರಣೆ ನಡೆಸುತ್ತಿರುವ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ನೇತೃತ್ವದ ಸುಪ್ರೀಂ ಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ ಕೇಂದ್ರ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದೆ. ಮುಖ್ಯವಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲೋಕ್ ಕುಮಾರ್ ಅವರ ಹೇಳಿಕೆ ಗೌಪ್ಯವಾದದ್ದು ಎಂದು ಪರಿಗಣಿಸಲಾಗಿದ್ದರೂ ಮಾಧ್ಯಮಗಳಿಗೆ ಸೋರಿಕೆಯಾಗಿದ್ದು ಹೇಗೆ ಎಂದು ನ್ಯಾಯಾಲಯ ಪ್ರಶ್ನಿಸಿದೆ.
ಅಲೋಕ್ ಕುಮಾರ್ ಪರ ವಕೀಲ ಫಾಲಿ ಎಸ್ ನಾರಿಮನ್ ಅವರು ನ್ಯಾಯಾಲಯದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದು, ಮಾಧ್ಯಮಗಳಲ್ಲಿ ಅಲೋಕ್ ಕುಮಾರ್ ಅವರ ಹೇಳಿಕೆ ಸೋರಿಕೆಯಾಗಿರುವ ವಿಚಾರ ತಿಳಿದು ತಮಗೆ ಅಚ್ಚರಿ ಮತ್ತು ಆಘಾತವಾಯಿತು ಎಂದು ಹೇಳಿದರೆ. ಅಂತೆಯೇ ಸಿಬಿಐ ಆಂತರಿಕ ವಿಚಾರ ಅತ್ಯಂತ ಗೌಪ್ಯ ವಿಚಾರವಾಗಿದ್ದು, ಈ ಸುದ್ದಿ ಬಿತ್ತರಿಸಿದ ನ್ಯೂಸ್ ಪೋರ್ಟಲ್ ಗೆ ಸಮನ್ಸ್ ಜಾರಿ ಮಾಡಬೇಕು ಎಂದು ತನ್ನ ವಾದ ಮಂಡಿಸಿದರು.
ಇನ್ನು ಅಲೋಕ್ ಕುಮಾರ್ ಅವರು ತಮ್ಮನ್ನು ಕಡ್ಡಾಯ ರಜೆ ಮೇಲೆ ಕಳುಹಿಸಿರುವ ಕೇಂದ್ರ ಸರ್ಕಾರದ ಕ್ರಮದ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿ ಸಲ್ಲಿಕೆ ಮಾಡಿದ್ದು, ಇತ್ತೀಚೆಗಷ್ಟೇ ಈ ಬಗ್ಗೆ ನ್ಯಾಯಾಲಯಕ್ಕೆ ತಮ್ಮ ಗೌಪ್ಯ ಹೇಳಿಕೆ ನೀಡಿದ್ದರು. ಮುಚ್ಚಿದ ಲಕೋಟೆಯಲ್ಲಿ ಅಲೋಕ್ ಕುಮಾರ್ ಅವರು ನೀಡಿದ್ದ ಲಿಖಿತ ಹೇಳಿಕೆ ಮಾಧ್ಯಮಗಳಲ್ಲಿ ಸೋರಿಕೆಯಾಗಿ ವರದಿ ಬಿತ್ತರಿಸಲಾಗಿತ್ತು.
ನಿಮ್ಮಲ್ಲಿ ಯಾರೂ ಕೂಡ ವಿಚಾರಣೆ ಕೇಳಲು ಅರ್ಹರಲ್ಲ ಎಂದ ಸಿಜೆಐ ಗಗೋಯ್
ಇನ್ನು ಫಾಲಿ ಎಸ್ ನಾರಿಮನ್ ಅವರು ಕೋರ್ಟ್ ಗೆ ನೀಡಿದ ಪತ್ರಿಕಾ ವರದಿಗಳನ್ನು ನೋಡಿದ ಮುಖ್ಯ ನ್ಯಾಯಮೂರ್ತಿ ರಂಜನ್ ಗಗೋಯ್ ಅವರು ಒಂದು ಕ್ಷಣ ಕೆಂಡಾಮಂಡಲರಾದರು. ಕೂಡಲೇ ಕಲಾಪದಲ್ಲಿ ಹಾಜರಿದ್ದ ಎಲ್ಲರನ್ನೂ ಉದ್ದೇಶಿಸಿ ಮಾತನಾಡಿದ ಅವರು ಕಲಾಪ ಆಲಿಸಲು ನೀವು ಯಾರೂ ಆರ್ಹರಲ್ಲ ಎಂದು ಕಿಡಿಕಾರಿದರು ಎಂದು ಅಲೋಕ್ ವರ್ಮಾ ಪರ ವಕೀಲರಾದ ಫಾಲಿ ಎಸ್ ನಾರಿಮನ್ ಹೇಳಿದ್ದಾರೆ. ಅಂತೆಯೇ ವರದಿ ಬಿತ್ತರಿಸಿದ ನ್ಯೂಸ್ ಪೋರ್ಟಲ್ ಗೂ ಸಮನ್ಸ್ ನೀಡಿ ಸ್ಪಷ್ಟನೆ ಕೇಳಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ನವೆಂಬರ್ 29ಕ್ಕೆ ಮುಂದೂಡಿದೆ.