ನವದೆಹಲಿ: ತಾನು ನೀಡಿದ್ದ ಸೂಚನೆಗಳನ್ನು ಪಾಲಿಸಲು ವಿಫಲವಾದ ಅಮರ್‌ಪಾಲಿ ಸಮೂಹ ಸಂಸ್ಥೆಗಳ ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸೂಚನೆಯನ್ನು ಸ್ಪಷ್ಟವಾಗಿ ನೀಡಲಾಗಿದೆ ಎಂದು ತೀಕ್ಷ್ಣವಾಗಿ ಎಚ್ಚರಿಕೆ ನೀಡಿದೆ.
ಭಾರತ ಹಾಗೂ ವಿದೇಶಗಳಲ್ಲಿ ತನ್ನ ಸಂಸ್ಥೆಯ ನಿರ್ದೇಶಕರು, ಅವರ ಕುಟುಂಬ ಸದಸ್ಯರು ಮುಖ್ಯ ಆರ್ಥಿಕ ಅಧಿಕಾರಿಗಳ ಹೆಸರಿನಲ್ಲಿರುವ ಒಟ್ಟಾರೆ ಆಸ್ತಿಯ ವಿವರಗಳನ್ನು ಡಿ.3 ವರೆಗೆ ಸಲ್ಲಿಸುವಂತೆ ರಿಯಲ್ ಎಸ್ಟೇಟ್ ಸಂಸ್ಥೆಯಾಗಿರುವ ಅಮರ್ ಪಾಲಿ ಸಮೂಹ ಸಂಸ್ಥೆಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಇದಷ್ಟೇ ಅಲ್ಲದೇ ಸುಪ್ರೀಂ ಕೋರ್ಟ್ ಈ ಹಿಂದೆ ನೀಡಿದ್ದ ಹಲವು ಆದೇಶಗಳನ್ನು ಪಾಲಿಸುವುದಕ್ಕೆ ಸಂಸ್ಥೆ ನಿರಂತರವಾಗಿ ವಿಫಲವಾಗುತ್ತಿದ್ದು, ಇದರಿಂದ ಅಸಮಾಧಾನಗೊಂಡಿರುವ ಸುಪ್ರೀಂ ಕೋರ್ಟ್ ಸಂಸ್ಥೆಯ ನಿರ್ದೇಶಕ ಹಾಗೂ ಪ್ರಮೋಟರ್ ಗಳಿಗೆ ತನ್ನ ಆದೆಶ ಪಾಲನೆ ಮಾಡುವುದಕ್ಕೆ ಕೊನೆಯ ಅವಕಾಶ ನೀಡಿದೆ.
ನ್ಯಾ.ಅರುಣ್ ಮಿಶ್ರಾ ಹಾಗೂ ಯುಯು ಲಲಿತ್ ಅವರಿದ್ದ ವಿಭಾಗೀಯ ಪೀಠ ಅಮರ್ ಪಾಲಿ ಸಮೂಹ ಸಂಸ್ಥೆ ತನ್ನ ಚಟುವಟಿಕೆಗಳ ವಿವರಗಳಿಂದ ಹಿಡಿದು ತನ್ನ ಹಣಕಾಸು ವಹಿವಾಟುಗಳ ಬಗ್ಗೆಯೂ ವಿವರಣೆ ನೀಡಬೇಕಿದೆ ಎಂದು ಸೂಚನೆ ನೀಡಿದ್ದು, ಸ್ಪಷ್ಟವಾಗಿ ಸೂಚನೆಗಳನ್ನು ಬರೆಯಲಾಗಿದೆ ಎಂದು ಎಚ್ಚರಿಸಿದೆ. ಒಂದು ವೇಳೆ ಕೋರ್ಟ್ ಸೂಚನೆಗಳನ್ನು ಪಾಲಿಸಲು ಸಂಸ್ಥೆ ವಿಫಲವಾದಲ್ಲಿ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುವುದಾಗಿಯೂ ಕೋರ್ಟ್ ಹೇಳಿದ್ದು ಮುಂದಿನ ವಿಚಾರಣೆಯನ್ನು ಡಿಸೆ.5 ಕ್ಕೆ ಮುಂದೂಡಿದೆ.