ದೇಶ

ಅಮೃತಸರ ರೈಲು ದುರಂತಕ್ಕೆ ಜನರ ನಿರ್ಲಕ್ಷವೇ ಕಾರಣ: ತನಿಖಾ ವರದಿ

Lingaraj Badiger
ನವದೆಹಲಿ: ದಸರಾ ಹಬ್ಬದಂದು ದೇಶವನ್ನೇ ಬೆಚ್ಚಿಬೀಳಿಸಿದ್ದ, 60 ಮಂದಿಯನ್ನು ಬಲಿಪಡೆದ ಅಮೃತಸರ ರೈಲು ದುರಂತಕ್ಕೆ ಜನರ ನಿರ್ಲಕ್ಷವೇ ಕಾರಣ ಎಂದು ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತರು ಗುರುವಾರ ವರದಿ ನೀಡಿದ್ದಾರೆ.
ಅಕ್ಟೋಬರ್ 19ರಂದು ಪಂಜಾಬ್​ನ ಅಮೃತಸರದ ಚೌರಾ ಬಜಾರ್​ ಬಳಿ ನಡೆಯುತ್ತಿದ್ದ ದಸರಾ ಉತ್ಸವದ ವೇಳೆ ಜನಸಮೂಹದ ಮೇಲೆಯೇ ರೈಲು ಹರಿದ ಘಟನೆಗೆ ಕಾರಣವಾದ ಅಂಶಗಳ ಬಗ್ಗೆ ರೈಲ್ವೆ ಸುರಕ್ಷತಾ ಮುಖ್ಯ ಆಯುಕ್ತ ಎಸ್ ಕೆ ಪಾಠಕ್ ಅವರು ಇಂದು ವರದಿ ನೀಡಿದ್ದು, ನಾಗರಿಕರ ಅಜಾಗರುಕತೆಯೇ ದುರಂತಕ್ಕೆ ಕಾರಣ ಎಂದು ಹೇಳಿದ್ದಾರೆ.
ತಾವು ನಿಂತಿರುವ ಜಾಗ ರೈಲ್ವೆ ಹಳಿ ಎಂದು ಗೊತ್ತಿದ್ದರೂ, ರೈಲು ಬರುವ ಬಗ್ಗೆ ತಿಳಿದಿದ್ದರೂ, ಜನ ಅದ್ಯಾವುದನ್ನೂ ಲೆಕ್ಕಿಸದೇ ಸಮಾರಂಭ ವೀಕ್ಷಿಸುತ್ತಿದ್ದರು. ಈ ವೇಳೆ ಏಕಾಏಕಿ ರೈಲು ಬಂದ ಹಿನ್ನೆಲೆಯಲ್ಲಿ ದುರಂತ ಸಂಭವಿಸಿದೆ ಎಂದು ತನಿಖಾ ವರದಿ ತಿಳಿಸಿದೆ.
ವಾಸ್ತವಿಕ ಮತ್ತು ಸಾಂದರ್ಭಿಕ ಸಾಕ್ಷ್ಯಾಧಾರಗಳನ್ನು ಎಚ್ಚರಿಕೆಯಿಂದ ಪರಿಗಣಿಸಿ ನಾನು ಈ ವರದಿ ನೀಡಿದ್ದು, ಜನರ ನಿರ್ಲಕ್ಷವೇ ದುರಂತಕ್ಕೆ ಕಾರಣ ಎಂದು ಪಾಠಕ್ ಅವರು ಹೇಳಿದ್ದಾರೆ. ಅಲ್ಲದೆ ಮುಂದಿನ ದಿನಗಳಲ್ಲಿ ಇಂತಹ ಘಟನೆ ಮರುಕಳುಹಿಸದಿರಲು ಕೆಲವು ಶಿಫಾರಸುಗಳನ್ನು ಮಾಡಿರುವುದಾಗಿ ತಿಳಿಸಿದ್ದಾರೆ.
SCROLL FOR NEXT