ನವದೆಹಲಿ/ಜೈಪುರ್: ಪ್ರಧಾನಿ ನರೇಂದ್ರ ಮೋದಿ ಹಾಗೂ ಉಮಾ ಭಾರತಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದ ರಾಜಸ್ಥಾನದ ಹಿರಿಯ ಕಾಂಗ್ರಸ್ ನಾಯಕ ಸಿಪಿ ಜೋಶಿ ಅವರು ಶುಕ್ರವಾರ ಕ್ಷಮೆಯಾಚಿಸಿದ್ದಾರೆ.
ನಿನ್ನೆ ರಾಜಸ್ಥಾನದಲ್ಲಿ ಚುನಾವಣಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಜೋಶಿ ಅವರು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ನಾಯಕಿ ಉಮಾ ಭಾರತಿ ಹಾಗೂ ಹಿಂದೂ ಕಾರ್ಯಕರ್ತೆ ಸಾಧ್ವಿ ರಿತಾಂಭರ ಅವರು ಬ್ರಾಹ್ಮಣರೇ ಅಲ್ಲ. ಅವರಿಗೆ ಹಿಂದೂ ಧರ್ಮದ ಬಗ್ಗೆ ಏನು ಗೊತ್ತಿತೆ? ಬ್ರಾಹ್ಮಣರಿಗೆ ಮಾತ್ರ ಹಿಂದೂ ಧರ್ಮದ ಬಗ್ಗೆ ಜ್ಞಾನವಿದೆ ಎಂದಿದ್ದರು.
ಜೋಶಿ ಅವರ ಈ ಹೇಳಿಕೆಯನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ತೀವ್ರವಾಗಿ ಖಂಡಿಸಿದ್ದು, ಅವರು ಈ ಕೂಡಲೇ ಕ್ಷಮೆಯಾಚಿಸಬೇಕು ಎಂದು ಸೂಚಿಸಿದ್ದರು.
ಜೋಷಿಯವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಆದರ್ಶಗಳು ಹಾಗೂ ಚಿಂತನೆಗಳಿಗೆ ಹೋಲಿಕೆ ಮಾಡಬಾರದು. ಯಾವುದೇ ಸಮುದಾಯ ಭಾವನೆಗಳಿಗೆ ನೋವಾಗುವಂತಹ ಹೇಳಿಕೆಯನ್ನು ಪಕ್ಷದ ನಾಯಕರು ನೀಡಬಾರದು ಎಂದು ರಾಹುಲ್ ಹೇಳಿದ್ದರು.