ಜೈಪುರ: ಚುನಾವಣಾ ಕಣವಾಗಿರುವ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಈಗಾಗಲೇ ವಿವಾದಾತ್ಮಕ ಹೇಳಿಕೆ, ನಡೆಗಳಿಂದ ಸುದ್ದಿಯಲ್ಲಿದೆ. ಇದೇ ಮಾದರಿಯ ವಿವಾದಗಳಿಂದಲೇ ಗುಜರಾತ್ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷಕ್ಕೆ ಸ್ವಲ್ಪ ಮಟ್ಟಿಗಿನ ಹಿನ್ನಡೆಯುಂಟಾಗಿತ್ತು. ಆದರೆ ಇದರಿಂದ ಎಚ್ಚೆತ್ತುಕೊಳ್ಳದ ಕಾಂಗ್ರೆಸ್ ನಾಯಕರು ರಾಜಸ್ಥಾನದಲ್ಲಿಯೂ ವಿವಾದಾತ್ಮಕ ಹೇಳಿಕೆಗಳನ್ನು ಮುಂದುವರೆಸಿದ್ದಾರೆ.
ರಾಜಸ್ಥಾನದ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಮಾತನಾಡಿರುವ ಕಾಂಗ್ರೆಸ್ ನಾಯಕ ಸಿ.ಪಿ ಜೋಷಿ, ಪ್ರಧಾನಿ ವಿರುದ್ಧ ಜಾತೀಯತೆ ನಿಂದನೆ ಮಾಡಿದ್ದು ಕೇವಲ ಬ್ರಾಹ್ಮಣರಷ್ಟೇ ಹಿಂದೂ ಧರ್ಮವನ್ನು ತಿಳಿದಿದ್ದಾರೆ ಎಂದು ಹೇಳಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸಚಿವೆ ಉಮಾ ಭಾರತಿ ಅವರ ಜಾತಿಯನ್ನು ಪ್ರಶ್ನಿಸಿದ್ದು, ಹಿಂದೂ ಧರ್ಮದ ಕುರಿತಾಗಿ ಅವರಿಗಿರುವ ಜ್ಞಾನವನ್ನು ಪ್ರಶ್ನಿಸಿದ್ದಾರೆ.
ಉಮಾ ಭಾರತಿ ಅವರ ಜಾತಿಯ ಬಗ್ಗೆ ಯಾರಿಗಾದರೂ ಗೊತ್ತಾ? ಸಾಧ್ವಿ ರಿತಾಂಭರ ಅವರ ಜಾತಿ ಗೊತ್ತಾ? ಯಾರಿಗಾದರೂ ಧರ್ಮದ ಬಗ್ಗೆ ಗೊತ್ತಿದ್ದರೆ ಅದು ಪಂಡಿತರಿಗೆ ಮಾತ್ರ, ಲೋದಿ ಸಮುದಾಯಕ್ಕೆ ಸೇರಿದ ಉಮಾ ಭಾರತಿ ಹಿಂದೂ ಧರ್ಮದ ಬಗ್ಗೆ ಮಾತನಾಡುವುದು ವಿಚಿತ್ರವಾಗಿದೆ ಎಂದು ಜೋಷಿ ಹೇಳಿದ್ದಾರೆ.
ಸಾಧ್ವಿ ರಿತಾಂಭರ ಬೇರೆ ಧರ್ಮಕ್ಕೆ ಸೇರಿದವರು ಆದರೆ ಹಿಂದೂ ಧರ್ಮದ ಬಗ್ಗೆ ಮಾತನಾಡುತ್ತಾರೆ. ನರೇಂದ್ರ ಮೋದಿ ಸಹ ಬೇರೆ ಧರ್ಮಕ್ಕೆ ಸೇರಿದವರು ಆದರೆ ಹಿಂದುತ್ವದ ಬಗ್ಗೆ ಮಾತನಾಡುತ್ತಾರೆ. ಹಿಂದುತ್ವದ ಬಗ್ಗೆ ಮಾತನಾಡುವುದು ಅವರ ಕೆಲಸ ಅಲ್ಲ. ಕೇವಲ ಬ್ರಾಹ್ಮಣರಿಗಷ್ಟೇ ಹಿಂದೂ ಧರ್ಮದ ಬಗ್ಗೆ ಗೊತ್ತಿದೆ ಎಂದು ಸಿಪಿ ಜೋಷಿ ಹೇಳಿದ್ದಾರೆ.