ನವದೆಹಲಿ: ಅಂಡಮಾನ್ ಮತ್ತು ನಿಕೋಬಾರ್ ದ್ವೀಪದಲ್ಲಿ ಅಮೆರಿಕ ಪ್ರವಾಸಿಗನ ಕೊಲೆ ಪ್ರಕರಣ ಇದೀಗ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಇಸ್ರೇಲ್ ಮೂಲದ ಕ್ರೈಸ್ಥ ಧಾರ್ಮಿಕ ಸಂಘಟನೆಯೊಂದು ಜಾನ್ ಅಲೆನ್ ಚೌನನ್ನು 'ಕ್ರೈಸ್ತ ಹುತಾತ್ಮ' ಎಂದು ಬಣ್ಣಿಸಿದೆ.
ಹೌದು... ಅಂಡಮಾನ್ ನಲ್ಲಿ ಬುಡಕಟ್ಟು ಜನಾಂಗದವರಿಂದ ಹತ್ಯೆಗೀಡಾದ ಜಾನ್ ಅಲೆನ್ ಚೌ ಮತಾಂತರಕ್ಕಾಗಿ ಅಲ್ಲಿಗೆ ತೆರಳಿದ್ದ ಎಂಬ ವಾದಕ್ಕೆ ಇಂಬು ನೀಡುವಂತೆ ಇಸ್ರೇಲ್ ಮೂಲದ ಕ್ರೈಸ್ಥ ಧಾರ್ಮಿಕ ಸಂಘಟನೆ 'ಕೋವೆನೆಂಟ್ ಜರ್ನಿ' ಆತನನ್ನು ಕ್ರೈಸ್ಥ ಹುತಾತ್ಮ ಎಂದು ಬಣ್ಣಿಸಿದೆ. ಈ ಬಗ್ಗೆ ತನ್ನ ಅಧಿಕೃತ ವೆಬ್ ಸೈಟ್ (
https://www.covenantjourney.org/details/john-allen-chau) ನಲ್ಲಿ ಸಂಸ್ಥೆ ಸುಧೀರ್ಘ ಲೇಖನ ಬರೆದಿದ್ದು, ಜಾನ್ ಅಲೆನ್ ಚೌ ಮತ್ತು ಆತನ ಜೀಸಸ್ ಪ್ರೇಮದ ಕುರಿತು ಲೇಖನ ಪ್ರಕಟಿಸಿದೆ.
ಇನ್ನು ಕೇಂದ್ರ ಸರ್ಕಾರ ಜಾನ್ ಅಲೆನ್ ಚೌ ಅಂಡಮಾನ್ ಗೆ ಮತಾಂತರಕ್ಕಾಗಿ ತೆರಳಿರಲಿಲ್ಲ ಎಂದು ಹೇಳಿದೆಯಾದರೂ ಇದೀಗ ಪ್ರಕಟವಾಗಿರುವ ವೆಬ್ ಸೈಟ್ ಲೇಖನದಲ್ಲಿ ಆತನ ಕ್ರೈಸ್ತ ಧರ್ಮದ ಪ್ರೇಮದ ಕುರಿತು ಸುಧೀರ್ಘ ಮಾಹಿತಿ ನೀಡಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ವೆಬ್ ಸೈಟ್ ತನ್ನ ಲೇಖನದಲ್ಲಿ 'ಸೆಂಟಿನೆಲ್ ದ್ವೀಪದಲ್ಲಿರುವ ಬುಡಕಟ್ಟು ಜನಾಂಗದವರೊಂದಿಗೆ ಏಸುವಿನ ಪ್ರೀತಿ ಹಂಚಲು ಜಾನ್ ತೆರಳಿದ್ದ ಎಂದು ಬರೆಯಲಾಗಿದೆ. ಅಲ್ಲದೆ ನವೆಂಬರ್ 15ರಂದೇ ಸೆಂಟಿನೆಲ್ ದ್ವೀಪದಲ್ಲಿ ಜಾನ್ ಮೇಲೆ ಬಿಲ್ಲುಬಾಣಗಳ ಮೂಲಕ ದಾಳಿಯಾಗಿತ್ತು. ಆದರೆ ಆತ ಕೈಯಲ್ಲಿ ಹಿಡಿದಿದ್ದ ಪವಿತ್ರ ಬೈಬಲ್ ಪುಸ್ತಕಕ್ಕೆ ಬಿಲ್ಲು ತಾಗಿ ಆತ ಪ್ರಾಣಾಪಾಯದಿಂದ ಪಾರಾಗಿದ್ಜ. ಆ ಮೂಲಕ ಬೈಬಲ್ ಆತನ ಪ್ರಾಣ ಉಳಿಸಿತ್ತು. ಅಂದು ಜಾನ್ ಆ ದ್ಪೀಪವನ್ನು ತೊರೆದಿದ್ದ. ಆದರೆ ನವೆಂಬರ್ 18ರಂದು ಮತ್ತೆ ಮೀನುಗಾರರ ಸಹಾಯದಿಂದ ದ್ವೀಪಕ್ಕೆ ತೆರಳಿದ್ದ ಜಾನ್ ನನ್ನು ಅಲ್ಲಿನ ಬುಡಕಟ್ಟು ಜನಾಂಗದವರು ಬಿಲ್ಲುಬಾಣಗಳ ಮೂಲಕ ದಾಳಿ ಮಾಡಿದ್ದರು.
ಈ ಬಾರಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಜಾನ್ ಮೃತದೇಹಕ್ಕೆ ಬುಡಕಟ್ಟು ಜನಾಂಗದವರು ಹಗ್ಗ ಕಟ್ಟಿ ಎಳೆದುಕೊಂಡು ಹೋಗುತ್ತಿರುವುದನ್ನು ಮೀನುಗಾರರು ನೋಡಿದ್ದಾರೆ ಎಂದು ಕೋವೆನೆಂಟ್ ಜರ್ನಿ ತನ್ನ ಸುದೀರ್ಘ ಲೇಖನದಲ್ಲಿ ಬರೆದುಕೊಂಡಿದೆ. ಅಲ್ಲದೇ ಜಾನ್ ಅಲೆನ್ ಚೌ ಕುರಿತ ಮತ್ತಷ್ಟು ಮಾಹಿತಿಗಳನ್ನು ಇಲ್ಲಿ ಹಂಚಿಕೊಳ್ಳಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos