ಚೆನ್ನೈ: ಎಸ್ಆರ್‌ಎಂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಗೆ ಲೈಂಕಿಗ ಕಿರುಕುಳ ನೀಡಿ, ಆಕೆ ಎದುರೇ ಹಸ್ತಮೈಥುನ ಮಾಡಿಕೊಂಡ ಆರೋಪದ 28 ವರ್ಷದ ಸ್ವಚ್ಛತಾ ಕೆಲಸಗಾರನನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ.
ಚೆನ್ನೈನ ಹೊರವಲಯದಲ್ಲಿರುವ ವಿವಿ ಆವರಣದಲ್ಲಿರುವ ವಿದ್ಯಾರ್ಥಿನಿಯರ ಹಾಸ್ಟೆಲ್ ಲಿಫ್ಟ್ ನಲ್ಲಿ ಸ್ವಚ್ಛತಾ ಸಿಬ್ಬಂದಿಯೊಬ್ಬ ವಿದ್ಯಾರ್ಥಿನಿಯೆದುರಿಗೇ ಹಸ್ತಮೈಥುನ ಮಾಡಿಕೊಂಡು ಲೈಂಗಿಕ ಕಿರುಕುಳ ನೀಡಿದ ಘಟನೆ ಗುರುವಾರ ನಡೆದಿತ್ತು.
ಈ ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಇಂದು ವಿಶ್ವವಿದ್ಯಾಲಯದ ಆವರಣದಲ್ಲಿ ತೀವ್ರ ಪ್ರತಿಭಟನೆ ನಡೆಸಿದರು. ಅಲ್ಲದೆ ದೂರು ನೀಡಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಆರೋಪಿಸಿದ್ದರು.
ವಿದ್ಯಾರ್ಥಿನಿಯರ ಹಾಸ್ಟೆಲ್ ಒಳಗೆ ನುಗ್ಗಿ ಇಂಥ ಕ್ರಿಯೆ ನಡೆಸಿರುವುದರಿಂದ ವಿಶ್ವವಿದ್ಯಾಲಯದ ಭದ್ರತೆಯ ಲೋಪ ಎದ್ದು ಕಾಣುತ್ತಿದ್ದು, ಇದು ದುರಾದೃಷ್ಟಕರ. ಇಂಥ ಘಟನೆ ಮತ್ತೆ ನಡೆಯದಂತೆ ಕ್ರಮ ಜರುಗಿಸಲಾಗುವುದು ಎಂದು ವಿವಿ ಹೇಳಿದೆ.
ಮೂರನೇ ವರ್ಷದ ಇಂಜಿನಿಯರಿಂಗ್ ವಿದ್ಯಾರ್ಥಿನಿ ಪ್ರಕಾರ, ಎರಡನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಲಿಫ್ಟ್ ನಲ್ಲಿ ಹೋಗುತ್ತಿದ್ದಾಗ, ಕಸ ತೆಗೆದುಕೊಂಡು ಹೋಗಲು ಬಂದಿದ್ದ ವ್ಯಕ್ತಿ ಆಕೆಯ ಎದುರಿಗೇ ಹಸ್ತಮೈಥುನ ಮಾಡಿಕೊಂಡು ಅಸಹ್ಯಕರವಾಗಿ ವರ್ತಿಸಿದ್ದಾನೆ. ಆಕೆ ಪರಾರಿಯಾಗಲು ಯತ್ನಿಸಿದಾಗ ಆಕೆಯನ್ನು ಅಡ್ಡಗಟ್ಟಿದ್ದಾನೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಕೂಡಲೆ ವಿದ್ಯಾರ್ಥಿನಿ ಘಟನೆ ಬಗ್ಗೆ ಹಾಸ್ಟೇಲ್ ವಾರ್ಡನ್ ಗೆ ದೂರು ನೀಡಿದ್ದಾರೆ.