ದೇಶ

ಎತ್ತರದಲ್ಲಿ ಏಕತಾ ಪ್ರತಿಮೆಯನ್ನೂ ಮೀರಿಸಲಿದೆ ಭವಿಷ್ಯದ ಆಂಧ್ರ ವಿಧಾನಸಭೆ!

Raghavendra Adiga
ವಿಜಯವಾಡ: ಆಂಧ್ರ ಪ್ರದೇಶ ಹೊಸ ರಾಜಧಾನಿ ಅಮರಾವತಿಯಲ್ಲಿ ನಿರ್ಮಾಣವಾಗಲಿರುವ ವಿಧಾನಸಭೆ ಕಟ್ಟಡವು ಗುಜರಾತ್ ನಲ್ಲಿ ಉದ್ಗಾಟನೆಯಾದ "ಏಕತಾ ಪ್ರತಿಮೆ"ಗಿಂತಲೂ ಎತ್ತರವಾಗಿರಲಿದೆ.
ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಭವಿಷ್ಯದ ವಿಧಾನಸಭೆ ಕಟ್ಟಡದ ನೀಲನಕ್ಷೆಗೆ ಅನುಮೋದನೆ ನೀಡಿದ್ದು ಇದು 250 ಮೀಟರ್‌ ಎತ್ತರವಿರಲಿದೆ.ಎಂದರೆ 182 ಮೀಟರ್ ಎತ್ತರ ಇರುವ ಏಕತಾ ಪ್ರತಿಮೆಗಿಂತಲೂ 68 ಮೀಟರ್ ಹೆಚ್ಚು ಎತ್ತರವಾಗಿರಲಿದೆ.
ನಾಯ್ಡು ಇದಾಗಲೇ ಕಟ್ಟಡ ವಿನ್ಯಾಸವನ್ನು ಬಹುತೇಕ ಅಂತಿಮಗೊಳಿಸಿದ್ದು ಯುಕೆ ಮೂಲದ ವಾಸ್ತುಶಿಲ್ಪಿ ನೋರ್ಮಾ ಫಾಸ್ಟರ್ಸ್ಈ ವಿನ್ಯಾಸವನ್ನು ರೂಪಿಸಿದ್ದಾರೆ.
ಕಟ್ಟಡವು ಮೂರು ಅಂತಸ್ತುಗಳನ್ನು ಹೊಂದಿರಲಿದೆ ಹಾಗೂ ಉಲ್ಟಾ ಲಿಲ್ಲಿ ಹೂವಿನ ಆಕಾರದಲ್ಲಿ ಇರಲಿದೆ ಎಂದು ಪೌರಾಡಳಿತ ಸಚಿವ ಪಿ.ನಾರಾಯಣ ಹೇಳಿದ್ದಾರೆ. ಸರ್ಕಾರ ಕಟ್ಟಡ ನಿರ್ಮಾಣ್ದ ಸಂಬಂಧ ಟೆಂಡರ್ ಪ್ರಕ್ರಿಯೆಯನ್ನು  ಅಂತಿಮಗೊಳಿಸಲು ಸುಮಾರು ಎರಡು ವರ್ಷ ಕಾಲ ತೆಗೆದುಕೊಳ್ಳಲಿದೆ ಎಂದು ನಿರೀಕ್ಷಿಸಲಾಗಿದೆ.
2,989 ಕೋಟಿ ರ್ಯು. ವೆಚ್ಚದಲ್ಲಿ ನಿರ್ಮಾಣವಾದ ಏಕತಾ ಪ್ರತಿಮೆಯನ್ನು ಪ್ರಧಾನಿ ಮೋದಿ ಉದ್ಘಾಟಿಸಿದ ಬೆನ್ನಿಗೇ ವಿವಿಧ ರಾಜ್ಯಗಳಲ್ಲಿ ನಾನಾ ಪ್ರತಿಮೆಗಳ ನಿರ್ಮಾಣದ ಕುರಿತು ಘೋಷಣೆಗಳು ಕೇಳಿಬಂದಿತ್ತು. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಯಲ್ಲಿ ರಾಮನ ಪ್ರತಿಮೆ ನಿರ್ಮಾಣ ಮಾಡುವುದಾಗಿ ಹೇಳಿದ್ದರೆ ಶಿವಸೇನೆ ಮಹಾರಾಷ್ಟ್ರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪನೆಗೆ ಕರೆಕೊಟ್ಟಿತ್ತು. ಅಲ್ಲದೆ ಕರ್ನಾಟಕದಲ್ಲಿ 38 ಮೀಟರ್ ಎತ್ತರದ ಕಾವೇರಿ ಮಾತೆ ಪ್ರತಿಮೆ ಸ್ಥಾಪನೆ ಮಾಡುವ ಮಾತು ಸಹ ಕೇಳಿ ಬಂದಿತ್ತು. 
ಇದೀಗ ನಾಯ್ಡು ಬಿಜೆಪಿ ಪಾಳಯದಿಂದ ಹೊರಬಂದು ಕೇಸರಿ ಪಕ್ಷದ ವಿರೋಧಿ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿದ್ದಾರೆ.ಈ ಸನ್ನಿವೇಶದಲ್ಲಿ ಮೋದಿಗೆ ಸಡ್ಡು ಹೊಡೆಯಲು ಏಕತಾ ಪ್ರತಿಮೆಗೆ ಎತ್ತರವಾದ ವಿಧಾನಸಭೆ ಕಟ್ಟಡ ನಿರ್ಮಾಣಕ್ಕೆ ಕೈಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
SCROLL FOR NEXT