ಬೆಂಗಳೂರಿನಲ್ಲಿ ಕುಖ್ಯಾತ ಸ್ಮಗ್ಲರ್ ಬಂಧನ, 5 ಕೋಟಿ ರು. ರಕ್ತ ಚಂದನ ಜಪ್ತಿ
ಬೆಂಗಳೂರಿನಲ್ಲಿ ಕುಖ್ಯಾತ ರಕ್ತ ಚಂದನ ಸ್ಮಗ್ಲರ್ ಹಾಗೂ ಆತನ ಸಹಾಯಕನ್ನು ಶನಿವಾರ ಕಡಪಾ ಪೊಲೀಸರು ಬಂಧಿಸಿದ್ದು,....
ಕಡಪ: ಬೆಂಗಳೂರಿನಲ್ಲಿ ಕುಖ್ಯಾತ ರಕ್ತ ಚಂದನ ಸ್ಮಗ್ಲರ್ ಹಾಗೂ ಆತನ ಸಹಾಯಕನ್ನು ಶನಿವಾರ ಕಡಪಾ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ 5 ಕೋಟಿ ರುಪಾಯಿ ಮೌಲ್ಯದ ರಕ್ತ ಚಂದನದ ತುಂಡುಗಳನ್ನು ಜಪ್ತಿ ಮಾಡಿದ್ದಾರೆ.
ಎರಡು ದಿನಗಳ ಹಿಂದೆ ಮಣ್ಣುರು ಪೊಲೀಸರ ವಾಹನ ತಪಾಸಣೆ ನಡೆಸುತ್ತಿದ್ದಾಗ ಸ್ಮಗ್ಲರ್ ಗೊಂಗಣ ಲೀಲಾ ಕುಮಾರ್ ಸಿಕ್ಕಿಬಿದ್ದಿದ್ದರು. ತನಿಖೆ ವೇಳೆ ಲೀಲಾ ಕುಮಾರ್ ಪೊಲೀಸರಿಗೆ ನೀಡಿದ ಮಾಹಿತಿಯನ್ನು ಆಧರಿಸಿ ನೆರೆಯ ಕರ್ನಾಟಕಕ್ಕೆ ಒಂದು ಪೊಲೀಸ್ ತಂಡವನ್ನು ಕಳುಹಿಸಲಾಗಿತ್ತು. ಆ ತಂಡ ಬೆಂಗಳೂರಿನ ಹೊರವಲಯದಲ್ಲಿ ದಾಳಿ ನಡೆಸಿ, ಕುಖ್ಯಾತ ಸ್ಮಗ್ಲರ್ ನನ್ನು ಬಂಧಿಸಿದೆ ಎಂದು ಕಡಪ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಬಿ ಲಕ್ಷ್ಮಿನಾರಾಯಣ ಅವರು ಹೇಳಿದ್ದಾರೆ.
ದಾಳಿಯ ವೇಳೆ ಸ್ಮಗ್ಲರ್ ಸಯೀದ್ ಮುಜೀಬ್ ಭಾಯಿ ಮತ್ತು ಆತನ ಸಹಾಯಕ ಮೊಹಮ್ಮದ್ ಗಯಾಜ್ ಮೊಹಮ್ಮದ್ ನನ್ನು ಬಂಧಿಸಲಾಗಿದೆ ಮತ್ತು ಮೂರು ಟನ್ ತೂಕದ 119 ರಕ್ತ ಚಂದನದ ತುಂಡುಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಕ್ತ ಚಂದನ ಕಳ್ಳಸಾಗಣೆಗೆ ಸಂಬಂಧಿಸಿದಂತೆ ಸ್ಮಗ್ಲರ್ ಸಯೀದ್ ವಿರುದ್ಧ ಕಡಪ ಮತ್ತು ಚಿತ್ತೂರ್ ಜಿಲ್ಲೆಯಲ್ಲಿ 49ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಅವರು ಹೇಳಿದ್ದಾರೆ.