ಅಯೋಧ್ಯೆಯಲ್ಲಿ ರಾಮಕಹಳೆ: ರಾಮ ಮಂದಿರಕ್ಕೆ ಠಾಕ್ರೆ ಭೇಟಿ, ಧರ್ಮಸಭೆಗೆ ಕ್ಷಣಗಣನೆ ಆರಂಭ
ಅಯೋಧ್ಯೆ: ರಾಮ ಮಂದಿರ ನಿರ್ಮಾಣಕ್ಕೆ ಅಯೋಧ್ಯೆಯಲ್ಲಿ ಹಿಂದೂಗಳು ರಾಮಕಹಳೆಯನ್ನು ಮೊಳಗಿಸುತ್ತಿದ್ದು, ಧರ್ಮಸಭೆಗೆ ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ರಾಮಮಂದಿರಕ್ಕೆ ಭೇಟಿ ನೀಡಿರುವ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆಯವರು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ರ್ಯಾಲಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಉದ್ಧವ್ ಠಾಕ್ರೆಯವರು ಇದೇ ಮೊದಲ ಬಾರಿಗೆ ಅಯೋಧ್ಯೆಗೆ ಆಗಮಿಸಿದ್ದಾರೆ. ನಿನ್ನೆಯಷ್ಟೇ ಸರಾಯು ನದಿ ಬಳಿ ಪ್ರಾರ್ಥನೆ ಸಲ್ಲಿಸಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕುಂಭಕರ್ಣ ರೀತಿಯ ನಿದ್ಧೆಯಿಂದ ಇನ್ನಾದರೂ ಎಚ್ಚೆತ್ತುಕೊಂಡು ಅಯೋಧ್ಯೆಯಲ್ಲಿ ಕೇಂದ್ರ ಸರ್ಕಾರ ರಾಮ ಮಂದಿರ ನಿರ್ಮಾಣದ ದಿನಾಂಕ ಘೋಷಣೆ ಮಾಡಬೇಕೆಂದು ಒತ್ತಾಯಿಸಿದರು.
ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಉತ್ತರಪ್ರದೇಶದಲ್ಲೂ ಬಿಜೆಪಿ ಸರ್ಕಾರವಿದೆ. ಹೀಗಾಗಿ ಇಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಕೇಂದ್ರ ಸರ್ಕಾರ ಶಾಸನ ಮಾಡಬೇಕು ಅಥವಾ ಸುಗ್ರೀವಾಜ್ಞೆ ಹೊರಡಿಸೇಬೇಕೆಂದು ಒತ್ತಾಯಿಸಿದರು.
ನೀವು ದೇವಸ್ಥಾನ ನಿರ್ಮಿಸುತ್ತೇವೆಂದು ಹೇಳುತ್ತೀರಿ. ಆದರೆ, ಯಾವಾಗ ಎಂದು ಹೇಳುತ್ತಿಲ್ಲ. ದೇವಸ್ಥಾನ ಯಾವಾಗ ನಿರ್ಮಿಸುತ್ತೀರಿ ಎಂಬುದನ್ನು ಸ್ಪಷ್ಟಪಡಿಸಿ. ಮುಂದಿನದ್ದನ್ನು ಆಮೇಲೆ ಚರ್ಚಿಸೋಣ ಎಂದು ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ವಿಳಂಬ ಧೋರಣೆ ಅನುಸರಿಸುತ್ತಿರುವ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.