ಕೋಲ್ಕತಾ: ಕೋಲ್ಕತಾದಿಂದ ಮುಂಬೈಗೆ ತೆರಳುತ್ತಿದ್ದ ಜೆಟ್ ಏರ್ ವೇಸ್ ವಿಮಾನದಲ್ಲಿ ಮುಖಕ್ಕೆ ಬಟ್ಟೆ ಕಟ್ಟಿಕೊಂಡು, ವಿಮಾನದಲ್ಲಿ ಉಗ್ರರಿದ್ದಾರೆ ಎಂದು ಸಂದೇಶ ಕಳುಹಿಸುತ್ತಿದ್ದ ವ್ಯಕ್ತಿಯನ್ನು ವಿಮಾನದಿಂದ ಕೆಳಗಿಳಿಸಿ ಪೊಲೀಸರು ವಶಕ್ಕೆ ಪಡೆದ ಘಟನೆ ಸೋಮವಾರ ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಷ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ.
ಜೆಟ್ ಏರ್ ವೇಸ್ ನ 9ಡಬ್ಲ್ಯು 0472 ವಿಮಾನದಲ್ಲಿ 21 ವರ್ಷದ ಜೋಗೆನ್ ಪೊದ್ದಾರ್ ಎಂಬ ವ್ಯಕ್ತಿ, ತಾನು ಪ್ರಯಾಣಿಸುತ್ತಿರುವ ವಿಮಾನದಲ್ಲಿ ಉಗ್ರರಿದ್ದಾರೆ, ನಾನು ಮಹಿಳೆಯರ ಹೃದಯ ಛಿದ್ರಗೊಳಿಸುತ್ತೇನೆ ಎಂದು ತನ್ನ ಮೊಬೈಲ್ ನಲ್ಲಿ ಸಂದೇಶ ಕಳುಹಿಸುತ್ತಿರುವುದನ್ನು ಸಹ ಪ್ರಯಾಣಿಕ ನೋಡಿದ್ದು, ಕೂಡಲೇ ವಿಮಾನ ಸಿಬ್ಬಂದಿಯ ಗಮಕ್ಕೆ ತಂದಿದ್ದಾರೆ. ಅವರು ತಕ್ಷಣ ಏರ್ ಟ್ರಾಫಿಕ್ ಕಂಟ್ರೋಲ್ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಸಿಐಎಸ್‌ಎಫ್ ಅಧಿಕಾರಿಗಳು ಪೊದ್ದಾರ್ ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ವಿಚಾರಣೆ ವೇಳೆ ಪೊದ್ದಾರ್ ತನ್ನ ಸ್ನೇಹಿತರೊಂದಿಗೆ ಜೋಕ್ ಮಾಡಿರುವುದಾಗಿ ತಿಳಿದು ಬಂದಿದ್ದು, ಉಗ್ರ ಜೋಕ್ ನಿಂದಾಗಿ ವಿಮಾನ 1 ಗಂಟೆ ತಡವಾಗಿ ಟೇಕಾಫ್ ಆಗಿದೆ.
ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲ ಪ್ರಯಾಣಿಕರನ್ನು ವಿಮಾನದಿಂದ ಕೆಳಗಿಳಿಸಿ ತಪಾಸಣೆ ನಡೆಸಿದ ಬಳಿಕ ಪೊದ್ದಾರ್ ನನ್ನು ಬಿಟ್ಟು ವಿಮಾನ ಮುಂಬೈಗೆ ಪ್ರಯಾಣ ಬೆಳಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics