ಕೊಚ್ಚಿ: ಫೇಸ್ ಬುಕ್ ಪೋಸ್ಟ್ ನಲ್ಲಿ ಧಾರ್ಮಿಕ ಭಾವನಗೆ ಧಕ್ಕೆ ಉಂಟು ಮಾಡಿದ ಆರೋಪದ ಮೇಲೆ ಕೇರಳ ಪೊಲೀಸರು ಸಾಮಾಜಿಕ ಕಾರ್ಯಕರ್ತೆ ರೆಹಾನಾ ಫಾತಿಮಾ ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಇತ್ತೀಚಿಗೆ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿ ಸುದ್ದಿಯಾಗಿದ್ದ ರೆಹಾನಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿತ್ತು. ಈ ಹಿನ್ನಲೆಯಲ್ಲಿ ಇಂದು ಆರೋಪಿಯನ್ನು ಕೊಚ್ಚಿಯಲ್ಲಿ ವಶಕ್ಕೆ ಪಡೆದ ಪೊಲೀಸರು, ವಿಚಾರಣೆಗಾಗಿ ಪತ್ತನಂತಿಟ್ಟ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ರೆಹಾನಾ ಫಾತಿಮಾ ಅವರ ಕೆಲವೊಂದು ಫೇಸ್ ಬುಕ್ ಪೋಸ್ಟ್‌ಗಳು ಧಾರ್ಮಿಕ ಮನೋಭಾವನೆಯನ್ನು ನೋಯಿಸುವಂತಿದೆ ಎಂದು ಆರೋಪಿಸಿ ರಾಧಾಕೃಷ್ಣ ಮೆನನ್ ಎಂಬವರು ಪತ್ತನಂತಿಟ್ಟ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಫಾತಿಮಾ ವಿರುದ್ಧ ಐಪಿಸಿ ಸೆಕ್ಷನ್ 295ಎ ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು.
ಪ್ರಕರಣ ದಾಖಲಾದ ನಂತರ ಬಂಧನ ಭೀತಿಯಲ್ಲಿದ್ದ ರೆಹಾನಾ ಫಾತಿಮಾ ಅವರು ಕೇರಳ ಹೈಕೋರ್ಟಿಗೆ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದರು. ಆಕೆಯ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು.