ಮತಘಟ್ಟೆಯಲ್ಲಿ ಮತದಾರರು (ಸಂಗ್ರಹ ಚಿತ್ರ)
ನವದೆಹಲಿ: ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದು ಬಿಂಬಿತವಾಗಿರುವ ಪಂಚರಾಜ್ಯ ವಿಧಾನಸಭೆ ಚುನಾವಣೆ ಪೈಕಿ ಇಂದು ಎರಡು ರಾಜ್ಯಗಳಲ್ಲಿ ಅಂದರೆ ಮಧ್ಯ ಪ್ರದೇಶ, ಮಿಜೋರಾಂನಲ್ಲಿ ಮತದಾನ ಆರಂಭವಾಗಿದೆ.
ಛತ್ತೀಸ್ಗಢದಲ್ಲಿ ಎರಡು ಹಂತದಲ್ಲಿ ಮತದಾರರು ಹಕ್ಕು ಚಲಾಯಿಸಿದ ಬಳಿಕ, ಈಗ ಮಧ್ಯಪ್ರದೇಶ ಹಾಗೂ ಮಿಜೋರಾಂನ ಜನರ ಸರದಿಯಾಗಿದ್ದು, ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದ್ದು, ತೀವ್ರ ಚಳಿಯ ನಡುವೆಯೇ ಮತದಾರರು ಸರತಿ ಸಾಲಲ್ಲಿ ಬಂದು ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಎರಡೂ ರಾಜ್ಯಗಳ ವಿಧಾನಸಭೆ ಚುನಾವಣೆ ಮುಂಬರುವ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದು ಹೇಳಲಾಗುತ್ತಿದ್ದು, ಇದೇ ಕಾರಣಕ್ಕೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿವೆ. ಎರಡೂ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಆಡಳಿತ ವಿರೋಧಿ ಅಲೆಗಳನ್ನು ತಣ್ಣಗಾಗಿಸುವ ಪ್ರಯತ್ನದಲ್ಲಿ ಹೈರಾಣಾಗಿದ್ದಾರೆ. ಮಧ್ಯಪ್ರದೇಶದಲ್ಲಿ ಸತತ 15 ವರ್ಷಗಳಿಂದ ಬಿಜೆಪಿ ಆಡಳಿತ ನಡೆಸುತ್ತಿದ್ದರೆ, ಮಿಜೋರಾಂನಲ್ಲಿ ಒಂದು ದಶಕದಿಂದ ಕಾಂಗ್ರೆಸ್ ಅಧಿಕಾರದಲ್ಲಿದೆ.
2005ರಲ್ಲಿ ಮುಖ್ಯಮಂತ್ರಿ ಹುದ್ದೆಗೇರಿದ ಶಿವರಾಜ್ ಸಿಂಗ್ ಚೌಹಾಣ್, ಸತತ ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಲು ಉತ್ಸುಕರಾಗಿದ್ದು, ಇತ್ತ ಮಿಜೋರಾಂನಲ್ಲಿ ಲಾಲ್ ತನ್ಹಾವಾಲಾ ಹ್ಯಾಟ್ರಿಕ್ ಕನಸು ಕಾಣುತ್ತಿದ್ದಾರೆ. ರಾಜಸ್ಥಾನ, ಛತ್ತೀಸ್ಗಢ ಹಾಗೂ ತೆಲಂಗಾಣ ರಾಜ್ಯಗಳ ಜತೆಗೆ ಡಿಸೆಂಬರ್ 11ರಂದು ಫಲಿತಾಂಶ ಘೋಷಣೆಯಾಗಲಿದೆ.
ಲೋಕಸಭೆ ಚುನಾವಣೆ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಮಿಜೋರಾಂಗಿಂತ ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಇಲ್ಲಿ ಅಧಿಕಾರ ಉಳಿಸಿಕೊಳ್ಳಲು ಬಿಜೆಪಿ ವಿಫಲವಾದರೆ ಲೋಕಸಭೆ ಚುನಾವಣೆ ಎದುರಿಸಲು ಭಾರಿ ಹಿನ್ನಡೆಯಾಗಲಿದೆ. ಒಂದೊಮ್ಮೆ ಬಿಜೆಪಿಯಿಂದ ಕಾಂಗ್ರೆಸ್ ಅಧಿಕಾರವನ್ನು ಕಸಿದುಕೊಳ್ಳದಿದ್ದರೆ, 2019ರ ಲೋಕಸಭೆ ಚುನಾವಣೆಯು ರಾಹುಲ್ ಗಾಂಧಿ ನಾಯಕತ್ವದಲ್ಲಿ ಸುಲಭದ ತುತ್ತಲ್ಲ ಎಂದು ಕೈಪಾಳಯಕ್ಕೆ ಸ್ಪಷ್ಟವಾಗಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics