ದೇಶ

ಜಿಡಿಪಿ ವಿವಾದ: ಚಿದಂಬರಂ ಸವಾಲು ಸ್ವೀಕರಿಸಿದ ನೀತಿ ಆಯೋಗದ ಉಪಾಧ್ಯಕ್ಷ

Lingaraj Badiger
ನವದೆಹಲಿ: ಪರಿಷ್ಕೃತ ಜಿಡಿಪಿ ಅಂಕಿ ಅಂಶಕ್ಕೆ ಸಂಬಂಧಿಸಿದಂತೆ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ಅವರ ಸವಾಲನ್ನು ಸ್ವೀಕರಿಸಿದ ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಅವರು, ಈ ಸಂಬಂಧ ತಾವೂ ಚರ್ಚೆಗೆ ಸಿದ್ಧ ಎಂದು ಗುರುವಾರ ಹೇಳಿದ್ದಾರೆ.
ಚಿದಂಬರಂ ಅವರೇ ನಾನು ನಿಮ್ಮ ಸವಾಲು ಸ್ವೀಕರಿಸಿದ್ದೇನೆ. ಹಿಂದಿನ ಮಾಹಿತಿಯನ್ನು ವಿಭಜಿಸಿ ಚರ್ಚಿಸೊಣ. ಈ ಸಂಬಂಧ ನಾನು ನಿನ್ನೆ ಮೂರು ಗಂಟೆಗಳ ಕಾಲ ವಿಸ್ತೃತವಾಗಿ ಸಂದರ್ಶನ ನೀಡಿದ್ದೇನೆ. ಆದರೂ ನಾನು ಮಾಧ್ಯಮಗಳಿಗೆ ಪ್ರಶ್ನಿಸಬೇಡಿ ಎಂದು ಹೇಳುವುದು ಅಸಹ್ಯಕರವಾಗಿದೆ. ನಿಮ್ಮ ಬಳಿ ಹೆಚ್ಚು ಸಮಂಜಸವಾದ ಮಾಹಿತಿ ಇದ್ದರೆ ನೀಡಿ ಎಂದು ರಾವ್ ಕುಮಾರ್ ಅವರು ಟ್ವೀಟ್ ಮಾಡಿದ್ದಾರೆ.
ಹೊಸ ಜಿಡಿಪಿ ಮಾಹಿತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಚಿದಂಬರಂ ಅವರು, ಪರಿಷ್ಕೃತ ಜಿಡಿಪಿ ಸಂಖ್ಯೆಗಳು ಒಂದು ಜೋಕ್. ಅದೊಂದು ಕೆಟ್ಟ ಜೋಕ್. ಕೈಚಳಕದ ಕೆಲಸ ಎಂದು ಟ್ವೀಟ್ ಮಾಡಿದ್ದರು. ಅಲ್ಲದೆ ಈ ಬಗ್ಗೆ ಚರ್ಚೆಗೆ ಕುಮಾರ್ ಒಪ್ಪಿಕೊಳ್ಳುತ್ತಾರಾ ಎಂದು ಸವಾಲು ಹಾಕಿದ್ದರು.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದ ರಾಜೀವ್ ಕುಮಾರ್ ಅವರು, ಹೊಸ ಲೆಕ್ಕಾಚಾರ ಪದ್ಧತಿಯು ಅತ್ಯಂತ ಸುಧಾರಿತವಾಗಿದ್ದು, ವಿಶ್ವಸಂಸ್ಥೆಯ ಸ್ಟ್ಯಾಂಡರ್ಡ್‌ ನ್ಯಾಶನಲ್‌ ಅಕೌಂಟ್‌ಗೆ ಸಮವಾಗಿದೆ. ಹಳೆಯ ಲೆಕ್ಕಾಚಾರಗಳ ಸಂಕೀರ್ಣ ಸ್ವರೂಪವನ್ನು ಬದಲಿಸಿದೆ ಎಂದು ಸಮರ್ಥಿಸಿಕೊಂಡಿದ್ದರು.
ಎಸ್ ಒ ಬಿಡುಗಡೆ ಮಾಡಿರುವ 2005-06 ರಿಂದ 2017-18ರವರೆಗಿನ ಪರಿಷ್ಕೃತ ಜಿಡಿಪಿ ದರ ಪಟ್ಟಿಯಲ್ಲಿ ಯುಪಿಎ ಆಡಳಿತದ ಸರಾಸರಿ ಜಿಡಿಪಿ ದರ ಶೇ.6.7 ಇದ್ದರೆ ಎನ್​ಡಿಎ ಸರ್ಕಾರದ್ದು ಶೇ. 7.35 ರಷ್ಟಿದೆ ಎಂದು ಹೇಳಿದೆ.
SCROLL FOR NEXT