ನವದೆಹಲಿ: ಉತ್ತರ ಪ್ರದೇಶದ ಆ್ಯಪಲ್ ಉದ್ಯೋಗಿ ಹತ್ಯೆಗೆ ಸಂಬಂಧಿಸಿದಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.
ಕಾರು ನಿಲ್ಲಿಸಲಿಲ್ಲವೆಂಬ ಕಾರಣಕ್ಕೆ ಪೇದೆಯ ಗುಂಡೇಟಿಗೆ ಬಲಿಯಾದ ವಿವೇಕ್ ತಿವಾರಿ ತಿವಾರಿ ಬಗ್ಗೆ ಟ್ವಿಟರ್ ನಲ್ಲಿ ಬರೆದುಕೊಂಡಿದ್ದ ಅರವಿಂದ್ ಕೇಜ್ರಿವಾಲ್, 'ಅಧಿಕಾರಕ್ಕಾಗಿ ಬಿಜೆಪಿ ನಾಯಕರು ಏನನ್ನು ಬೇಕಾದರೂ ಮಾಡುತ್ತಾರೆ. ವಿವೇಕ್ ತಿವಾರಿ ಹಿಂದೂ ಆಗಿದ್ದರೂ ಆತನನ್ನು ಹತ್ಯೆ ಮಾಡಲಾಯಿತು. ಹಿಂದೂಗಳನ್ನು ರಕ್ಷಿಸುತ್ತೇವೆ ಎಂದು ಹೇಳುವ ಬಿಜೆಪಿ, ವಿವೇಕ್ ತಿವಾರಿಯನ್ನೇಕೆ ಹತ್ಯೆ ಮಾಡಿದೆ.? ಬಿಜೆಪಿ ಹಿಂದೂಗಳ ಹಿತಬಯಸುವ ಪಕ್ಷವಲ್ಲ. ಅಧಿಕಾರ ಹಿಡಿಯಲು ಹಿಂದೂಗಳನ್ನು ಹತ್ಯೆ ಮಾಡಲು ಸಹ ಬಿಜೆಪಿ ಹಿಂಜರಿಯುವುದಿಲ್ಲ ಎಂದು ಆರೋಪಿಸಿದ್ದರು.
ಕೇಜ್ರಿವಾಲ್ ಹೇಳಿಕೆ ವ್ಯಾಪಕ ವಿವಾದಕ್ಕೆ ಗುರಿಯಾದ ಬೆನ್ನಲ್ಲೇ ಇದೀಗ ಅವರ ವಿರುದ್ದ ಪೊಲೀಸ್ ದೂರು ದಾಖಲಾಗಿದೆ. ಬಿಜೆಪಿ ವಕ್ತಾರ ಅಶ್ವಿನಿ ಉಪಾಧ್ಯಾಯ ಎಂಬುವವರು ಕೇಜ್ರಿವಾಲ್ ವಿರುದ್ಧ ದೆಹಲಿಯ ಲೋಕಮಾರ್ಗ ತಿಲಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಐಪಿಸಿ ಸೆಕ್ಷನ್ 153A, 295A, 504 & 505 ಮತ್ತು ಐಟಿ ಕಾಯ್ದೆ ಕಲಂ 67ರ ಅಡಿಯಲ್ಲಿ ಕೇಜ್ರಿವಾಲ್ ವಿರುದ್ಧ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಕೇಜ್ರಿವಾಲ್ ತಮ್ಮ ಟ್ವೀಟ್ ಗಳ ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುತ್ತಿದ್ದು, ಸಮಾಜಗಳ ನಡುವೆ ಕೋಮುದಳ್ಳುರಿ ವಿಷದ ಬೀಜ ಬಿತ್ತುತ್ತಿದ್ದಾರೆ. ಹೀಗಾಗಿ ಬೆಳಗ್ಗೆ 10ಗಂಟೆಯೊಳಗೆ ಕೇಜ್ರಿವಾಲ್ ಬಹಿರಂಗವಾಗಿ ಬೇಷರತ್ ಕ್ಷಮೆಯಾಚಿಸಬೇಕು ಇಲ್ಲವೇ ಕಾನೂನು ಕ್ರಮ ಎದುರಿಸಬೇಕು ಎಂದು ಉಪಾಧ್ಯಾಯ ಆಗ್ರಹಿಸಿದ್ದಾರೆ.