ಮುಂಬೈ:ನಟ ನಾನಾ ಪಾಟೇಕರ್ ತಮಗೆ ಲೈಂಗಿಕ ಕಿರುಕುಳ ನೀಡಿದ್ದರು ಎಂದು ಆರೋಪ ಮಾಡುತ್ತಿರುವ ನಟಿ ತನುಶ್ರೀ ದತ್ತ ಪೊಲೀಸರಿಗೆ ದೂರು ಸಲ್ಲಿಸಿದರೆ ಪೊಲೀಸರಿಂದ ತನಿಖೆ ನಡೆಸಲಾಗುವುದು ಎಂದು ಮಹಾರಾಷ್ಟ್ರ ಸಚಿವ ದೀಪಕ್ ಕೆಸರ್ ಕರ್ ಹೇಳಿದ್ದಾರೆ.
ಗ್ರಾಮೀಣ ವಿಭಾಗದ ರಾಜ್ಯ ಗೃಹ ಸಚಿವರಾಗಿರುವ ದೀಪಕ್ ಕೆಸರ್ ಕರ್, ನಾನಾ ಪಾಟೇಕರ್ ಪರ ಸರ್ಕಾರ ಪಕ್ಷಪಾತ ಮಾಡುವುದಿಲ್ಲ ಎಂದು ಭರವಸೆ ನೀಡಿದ್ದಾರೆ
ಈ ಸಂಬಂಧ ನಿನ್ನೆ ಪ್ರತಿಕ್ರಿಯಿಸಿದ ಶಿವಸೇನಾ ಸಚಿವರು , ನಾನಾ ಪಾಟೇಕರ್ ಸುಪ್ರಸಿದ್ದ ವ್ಯಕ್ತಿತ್ವವುಳ್ಳವರಾಗಿದ್ದು, ರಾಜ್ಯಕ್ಕಾಗಿ ಹಲವು ಮಹತ್ವಪೂರ್ಣ ಕಾರ್ಯಗಳನ್ನು ಮಾಡಿರುವುದಾಗಿ ಹೇಳಿದ್ದರು. ಅಲ್ಲದೇ, ಪ್ರಕರಣ ನಡೆದು 10 ವರ್ಷಗಳಾಗಿದ್ದು, ತನುಶ್ರೀ ದತ್ತ ಏಕೆ ಪೊಲೀಸರಿಗೆ ದೂರು ನೀಡಿರಲಿಲ್ಲ ಎಂದು ಪ್ರಶ್ನಿಸಿದ್ದರು.
ಅಧಿಕೃತವಾಗಿ ದೂರು ದಾಖಲಾದ್ದರೆ ಪೊಲೀಸರು ಪ್ರಾಮಾಣಿಕ ರೀತಿಯಲ್ಲಿ ತನಿಖೆ ನಡೆಸಲಿದ್ದು, ಇಬ್ಬರಿಗೂ ನ್ಯಾಯ ದೊರಕಿಸಲಿದ್ದಾರೆ . ಸರ್ಕಾರ ಯಾರ ಪರವಾಗಿಯೂ ಇಲ್ಲ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಒಂದೇ ಎಂದು ಕೆಸರ್ ಕರ್ ಸುದ್ದಿಗಾರರಿಗೆ ಇಂದು ತಿಳಿಸಿದರು.
ಸಾಮಾಜಿಕ ಕಾರ್ಯಕರ್ತರಾಗಿ ನಾನಾ ಪಾಟೇಕರ್ ಹೆಚ್ಚಿನ ಕೆಲಸ ಮಾಡಿರುವುದಾಗಿ ನಿನ್ನೇ ಹೇಳಿದೆ. ದೂರು ದಾಖಲಾದರೆ ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಅವರು ಹೇಳಿದ್ದಾರೆ.
2008 ರಲ್ಲಿ ಹಾರ್ನ್ ಓಕೆ ಪ್ಲೀಸಸ್ ಚಿತ್ರದ ಚಿತ್ರೀಕರಣ ವೇಳೆಯಲ್ಲಿ ನಾನಾ ಪಾಟೇಕರ್ ತಮ್ಮ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತನುಶ್ರೀ ದತ್ತ ಇತ್ತೀಚಿಗೆ ಆರೋಪಿಸಿದ್ದರು.