ನವದೆಹಲಿ: ದಿನದಿಂದ ದಿನಕ್ಕೆ ತೈಲ ಬೆಲೆ ಏರಿಕೆಯಾಗುತ್ತಿರುವ ಹಿನ್ನಲೆಯಲ್ಲಿ ಕಂಗಾಲಾಗಿದ್ದ ಭಾರತೀಯರಿಗೆ ಕೇಂದ್ರ ಸರ್ಕಾರ ತುಸು ನಿರಾಳವನ್ನು ನೀಡಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ರೂ.2.50 ಇಳಿಕೆ ಮಾಡಿದೆ.
ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ರೂ.1.50 ಇಳಿಕೆ ಮಾಡಿರುವುದಾಗಿ ಕೇಂದ್ರ ಸಚಿವ ಅರುಣ್ ಜೇಟ್ಲಿಯವರು ಹೇಳಿದ್ದಾರೆ.
ಕೇಂದ್ರ ಸರ್ಕಾರ ರೂ.1.50 ಅಬಕಾರಿ ಸುಂಕವನ್ನು ಇಳಿಕೆ ಮಾಡಲಿದೆ. ತೈಲ ಕಂಪನಿಗಳು ರೂ.1 ಇಳಿಕೆ ಮಾಡಲಿವೆ. ಒಟ್ಟಾರೆಯಾಗಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ರೂ.2.50 ಕಡಿತವಾಗಲಿದ್ದು, ತಕ್ಷಣದಿಂದಲೇ ನೂತನ ದರ ಜಾರಿಗೆ ಬರಲಿದೆ. ಅಬಕಾರಿ ಸುಂಕ ಇಳಿಕೆಯಿಂದ ಪ್ರಸಕ್ತ ವರ್ಷ ಕೇಂದ್ರ ಸರ್ಕಾರಕ್ಕೆ ರೂ.10.500 ಕೋಟಿ ಹೊರೆ ಬೀಳಲಿದೆ ಎಂದು ತಿಳಿಸಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ರೂ.2.50ರವರೆಗೂ ಕಡಿತಗೊಳಿಸುವ ಕುರಿಸು ಎಲ್ಲಾ ರಾಜ್ಯಗಳಿಗೂ ಪತ್ರ ಬರೆಯಲಾಗುತ್ತದೆ. ಆಯಾ ರಾಜ್ಯಗಳೂ ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕಡಿತಗೊಳಿಸಲಿ. ಹವಾರು ಬೃಹತ್ ಆರ್ಥಿಕ ದತ್ತಾಂಶಗಳು ಸ್ಥಿರ ಕ್ರಮಗಳನ್ನು ಸೂಚಿಸುತ್ತಿವೆ. ಮೊದಲ ತ್ರೈಮಾಸಿಕ ಫಲಿತಾಂಶಗಳು ಶೇ.8.2ರಷ್ಟು ಬೆಳವಣಿಗೆಯನ್ನು ತೋರಿಸಿದ್ದರೆ, ಹಣದುಬ್ಬರವು ಶೇ.4ಕ್ಕಿಂತಲೂ ಕಡಿಮೆಯಿದೆ ಎಂದಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಪ್ರತಿನಿತ್ಯ ಏರಿಕೆ ಕಾಣುತ್ತಿರುವುದರಿಂದ ಗ್ರಾಹಕರು ಕಂಗಾಲಾಗಿದ್ದರು. ಪಂಚರಾಜ್ಯಗಳ ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮವನ್ನು ಕೈಗೊಂಡಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos