ನವದೆಹಲಿ: ಮಧ್ಯಪ್ರದೇಶದಲ್ಲಿ ನರ್ಮದಾ ಪೂಜೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪಾಲ್ಗೊಂಡ ಬಗ್ಗೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆಗೆ ಪ್ರತಿಕ್ರಿಯಿಸಿದ ಎನ್ ಸಿಪಿ ನಾಯಕ ಹಾಗೂ ಸಂಸದ ಮಜೀದ್ ಮೆಮನ್, ಪ್ರಧಾನಿ ನರೇಂದ್ರ ಮೋದಿಯವರು ಪ್ರಯಾಣಿಸುತ್ತಿರುವ ದೋಣಿಯಲ್ಲಿಯೇ ಸ್ಮೃತಿ ಇರಾನಿಯವರು ಕೂಡ ನೌಕಾಯಾನ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರು ಮುಸ್ಲಿಂಮರಿಗಾಗಿ ಮೊಸಳೆ ಕಣ್ಣೀರು ಕೂಡ ಹಾಕುವುದಿಲ್ಲ ಎಂದು ಟೀಕಿಸಿದ್ದಾರೆ.
ಸಚಿವೆ ಸ್ಮೃತಿ ಇರಾನಿಯವರು ಕಳೆದ ಶುಕ್ರವಾರ ಸಂದರ್ಶನವೊಂದರಲ್ಲಿ ರಾಹುಲ್ ಗಾಂಧಿ ವಿರುದ್ಧ ಟೀಕಿಸಿ, ಚುನಾವಣೆಯನ್ನು ಎದುರಿಸುತ್ತಿರುವ ಮಧ್ಯ ಪ್ರದೇಶದ ಮೊರೆನಾದಲ್ಲಿ ನರ್ಮದಾ ಪೂಜೆಯಲ್ಲಿ ಪಾಲ್ಗೊಂಡು ಆರತಿ ಎತ್ತಿದ ಬಗ್ಗೆ ಟೀಕಿಸಿದ್ದರು.
ಚುನಾವಣೆಯಿರುವುದರಿಂದ ಹಿಂದೂಗಳ ನೆನಪಾಗುತ್ತಿದೆ, ಹಿಂದೂಗಳ ಮತ ಸೆಳೆಯಲು ಭಕ್ತಿಯ ನಾಟಕವಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಇದಕ್ಕೆ ಸಂಸದ ಮೆನನ್ ಪ್ರತಿಕ್ರಿಯಿಸಿ ಸ್ಮೃತಿ ಇರಾನಿಯವರ ಇಂತಹ ಟೀಕೆಗಳು ಅವರಿಗೆ ಹಿಡಿಸುವುದಿಲ್ಲ. ಅವರು ಪ್ರಧಾನಿಯವರೇ ದೋಣಿಯಲ್ಲಿಯೇ ನೌಕಾಯಾನ ಮಾಡುತ್ತಿದ್ದಾರೆ. 2014ರಿಂದ ಇಲ್ಲಿಯವರೆಗೆ ಪ್ರಧಾನಿ ಮೋದಿ ಮುಸ್ಲಿಂರ ಟೊಪ್ಪಿ ಧರಿಸಲು ಕೂಡ ಹಿಂದೇಟು ಹಾಕುತ್ತಿದ್ದರು. ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಮುಸ್ಲಿಂರ ಹತ್ಯೆಯಾದರೆ ಅವರು ವಿರೋಧಿಸುತ್ತಿರಲಿಲ್ಲ. ಮುಸ್ಲಿಂರನ್ನು ಈ ರಾಷ್ಟ್ರದ ಹಿಂದೂಗಳಂತೆ ಅವರು ಕಾಣುತ್ತಿಲ್ಲ. ಮುಸಲ್ಮಾನರಿಗಾಗಿ ಮೊಸಳೆ ಕಣ್ಣೀರು ಕೂಡ ಹಾಕುವುದಿಲ್ಲ. ಆದರೆ ಇಂದು ಹಠಾತ್ತಾಗಿ ಇಂದೋರ್ ಗೆ ಹೋಗಿ ಮುಸಲ್ಮಾನರನ್ನು ಭೇಟಿ ಮಾಡುತ್ತಾರೆ, ಏನಿದು, ಚುನಾವಣಾ ಗಿಮಿಕ್ , ರಾಜಕೀಯದಾಟವೇ ಎಂದು ಪ್ರಶ್ನೆ ಮಾಡಿದ್ದಾರೆ.