ಲಖನೌ: ಗುಜರಾತ್ ನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಸಲಾಗುತ್ತಿದೆ ಎಂಬ ಮಾಹಿತಿ ದೇಶಾದ್ಯಂತ ಗಮನಸೆಳೆದಿದ್ದು ಗುಜರಾತ್ ನಲ್ಲಿ ಉತ್ತರ ಭಾರತೀಯರ ಮೇಲೆ ಹಲ್ಲೆ ನಡೆಯುತ್ತಿಲ್ಲ ಎಂದು ಸ್ವತಃ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.
ಅತ್ಯಾಚಾರ ಪ್ರಕರಣವೊಂದರಲ್ಲಿ ಬಿಹಾರ ಮೂಲದ ವ್ಯಕ್ತಿಯೋರ್ವ ಬಂಧನಕ್ಕೊಳಗಾಗಿದ್ದು, ಈ ಘಟನೆಯ ನಂತರ ಗುಜರಾತ್ ನ ಉತ್ತರ ಭಾಗದಲ್ಲಿ ಉತ್ತರ ಪ್ರದೇಶವೂ ಸೇರಿದಂತೆ ಗುಜರಾತ್ ನಲ್ಲಿ ನೆಲೆಸಿರುವ ಹಿಂದಿ ಭಾಷಿಕರ ಮೇಲೆ ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ, ಪರಿಣಾಮ 20,000 ಕ್ಕೂ ಹೆಚ್ಚು ಜನರು ಗುಜರಾತ್ ನ್ನು ತೊರೆದಿದ್ದಾರೆ ಎಂಬ ವರದಿಗಳು ಪ್ರಕಟವಾಗಿದ್ದವು. ಘಟನೆ ಬಗ್ಗೆ ಸ್ಪಷ್ಟನೆ ನೀಡಿದ್ದ ಗುಜರಾತ್ ಸರ್ಕಾರ ಕಳೆದ 48 ಗಂಟೆಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ ಎಂದು ಗುಜರಾತ್ ಸರ್ಕಾರ ಸ್ಪಷ್ಟನೆ ನೀಡಿತ್ತು.
ಹಲ್ಲೆ ಪ್ರಕರಣಗಳ ವರದಿಯ ಬಗ್ಗೆ ಗುಜರಾತ್ ಸಿಎಂ ರೂಪಾನಿ ಅವರೊಂದಿಗೆ ಮಾತನಾಡಿದ್ದೇನೆ, ಕಳೆದ 3 ದಿನಗಳಿಂದ ಅಂತಹ ಯಾವುದೇ ಘಟನೆಗಳು ನಡೆದಿಲ್ಲ ಗುಜರಾತ್ ಸಿಎಂ ಹೇಳಿದ್ದಾರೆಂದು ಆದಿತ್ಯನಾಥ್ ತಿಳಿಸಿದ್ದಾರೆ. ಗುಜರಾತ್ ಶಾಂತಿಯನ್ನು ಬಯಸುವ ರಾಜ್ಯ, ಅಭಿವೃದ್ಧಿಗೆ ಮಾದರಿ, ಯಾವುದೇ ವಿಷಯ ಸಿಗದೇ ಇದ್ದಾಗ ಕೆಲವರು ಈ ರೀತಿಯ ವದಂತಿಗಳನ್ನು ಹಬ್ಬಿಸುತ್ತಾರೆ. ಅಭಿವೃದ್ಧಿ ಬೇಕಿಲ್ಲದವರು ಈ ರೀತಿಯ ವದಂತಿಗಳನ್ನು ಹಬ್ಬಿಸುತ್ತಾರೆ ಎಂದು ಆದಿತ್ಯನಾಥ್ ಹೇಳಿದ್ದಾರೆ.