ದೇಶ

ಕರ್ನಾಟಕದಲ್ಲಷ್ಟೇ ಲೋಕಸಭೆ ಉಪಚುನಾವಣೆ: ಆಯೋಗ ನೀಡಿದ ಸ್ಪಷ್ಟನೆ ಏನು?

Raghavendra Adiga
ನವದೆಹಲಿ: ಕರ್ನಾಟಕದಲ್ಲಿನ ಮೂರು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವ ಚುನಾವಣಾ ಆಯೋಗದ ನಿರ್ಧಾರದ ಕುರಿತು ವಿವಾದಗಳು ಹುಟ್ಟಿರುವ ಬೆನ್ನಲ್ಲೇ ಆಯೋಗವು ತನ್ನ ನಿರ್ಧಾರದ ಹಿಂದಿನ ಸ್ಪಷ್ಟ ಕಾರಣವನ್ನು ಬಹಿರಂಗಪಡಿಸಿದೆ. 
ಲೋಕಸಭೆ ಮಹಾ ಸಮರಕ್ಕೆ ಕೇವಲ 6 ತಿಂಗಳಿದೆ ಎನ್ನುವಾಗಲೇ ಕರ್ನಾಟಕದಲ್ಲಿ ಉಪ ಚುನಾವಣೆ ನಡೆಸಬೇಕಾಗಿ ಬಂದಿರುವುದು ಹಲವು ರಾಜಕೀಯ ಪಕ್ಷಗಳ ನಾಯಕರಿಗೆ ಅಸಮಾಧಾನವನ್ನುಂಟು ಮಾಡಿದೆ.
ಆದರೆ ಆಯೋಗ ಹೇಳುವಂತೆ 1951ರ ಜನಪ್ರತಿನಿಧಿ ಕಾಯ್ದೆಯ ಸೆಕ್ಷನ್ 151ಎ ನಿಯಮದ ಅನುಸಾರ ದೇಶದ ಯಾವುದೇ ಭಾಗದಲ್ಲಿ ಸಂಸತ್ತು ಅಥವಾ ವಿಧಾನಸಭೆ ಅಭ್ಯರ್ಥಿ ಮೃತನಾದರೆ ಅಥವಾ ರಾಜೀನಾಮೆ ಸಲ್ಲಿಸಿದ್ದರೆ ಅದರಿಂದಾಗಿ ತೆರವಾದ ಸ್ಥಾನವನ್ನು ಆರು ತಿಂಗಳಿನಲಿ ಚುನಾವಣೆ ಮೂಲಕ ಭರ್ತಿಗೊಳಿಸುವುದು ಆಯೋಗದ ಜವಾಬ್ದಾರಿಯಾಗಿದೆ.ಹೀಗಾಗಿ ಕರ್ನಾಟಕದ ಮೂರು ಲೋಕಸಭಾ ಸ್ಥಾನಗಳಿಗೆ ಉಪ ಚುನಾವಣೆ ನಡೆಸುವುದು ಅನಿವಾರ್ಯವಾಗಲಿದೆ.
ಆಂಧ್ರಪ್ರದೇಶದ ಐದು ಲೋಕಸಭಾ ಸ್ಥಾನಗಳು ಖಾಲಿ ಇದ್ದರೂ ಅಲ್ಲೇಕೆ ಚುನಾವಣೆ ಘೋಷಣೆಯಾಗಿಲ್ಲ, ಕರ್ನಾಟಕದಲ್ಲಿ ಮಾತ್ರವೇ ಏಕೆ ಮತದಾನ ನಡೆಯುತ್ತಿದೆ ಎನ್ನುವ ಮಾದ್ಯಮಗಳ ಪ್ರಶ್ನೆಗಳಿಗೆ ಆಯೋಗ ಈ ಉತ್ತರ ನೀಡಿದೆ.
ಕಾನೂನಿನಡಿಯಲ್ಲಿ ಸಾರ್ವತ್ರಿಕ ಚುನಾವಣೆಗೆ ಒಂದು ವರ್ಷದ ಅವಧಿ ಬಾಕಿ ಇದ್ದರೆ ಆಗ ಯಾವುದೇ ಕ್ಷೇತ್ರವನ್ನೂ ಜನಪ್ರತಿನಿಧಿಗಳಿಲ್ಲದೆ ಕಾಲಿ ಬಿಡಲಾಗುವುದಿಲ್ಲ.ಲೋಕಸಭೆ ಚುನಾವಣೆಗೆ 2019 ರ ಜೂನ್ 3ರವರೆಗೆ ಸಮಯಾವಕಾಶವಿರುವ ಕಾರಣ ಈ ಕಾಲಮಾನವನ್ನು ಪರಿಗಣಿಸಿ ಚುನಾವಣೆ ಘೋಷಣೆ ಮಾಡಲಾಗಿದೆ ಎಂದು ಆಯೋಗ ತನ್ನ ಉತ್ತರದಲ್ಲಿ ವಿವರಿಸಿದೆ.
ಆಂಧ್ರ ಪ್ರದೇಶದ ಐವರು ಸಂಸದರು 2018ರ ಜೂನ್ 20ಕ್ಕೆ ರಾಜೀನಾಮೆ ಸಲ್ಲಿಸಿದ್ದು ಈ ದಿನಾಂಕವು ಮುಂಬರುವ ಲೋಕಸಭೆ ಚುನಾವಣೆ ದಿನಾಂಕಕ್ಕೆ ಒಂದುವರ್ಷಕ್ಕಿಂತ ಕಡಿಮೆ ಇದ್ದ ಕಾರಣ ಅಲ್ಲಿ ಉಪ ಚುನಾವಣೆ ನಡೆಸುವುದು ಅನಿವಾರ್ಯವಲ್ಲ ಎಂದು ಆಯೋಗ ಹೇಳಿದೆ.
ಕರ್ನಾಟಕದ ಬಳ್ಳಾರಿ ಮತ್ತು ಶಿವಮೊಗ್ಗ ಲೋಕಸಭಾ ಕ್ಷೇತ್ರವು 2018ರ ಮೇ 18 ಹಾಗೂ ಮಂಡ್ಯ ಕ್ಷೇತ್ರವು 21ರಂದು ತೆರವಾಗಿದ್ದು ಇಲ್ಲಿ ಇದೇ ವರ್ಷ ನವೆಂಬರ್ 3ಕ್ಕೆ ಉಪಚುನಾವಣೆ ನಡೆಯಲಿದೆ.
SCROLL FOR NEXT