ದೇಶ

ಪಂಜಾಬ್: ಗ್ರಾಮದ ಅಜ್ಜಿ-ತಾತಂದಿರನ್ನು ವಿಮಾನದಲ್ಲಿ ಹಾರಾಡಿಸಿ ಕನಸು ಈಡೇರಿಸಿಕೊಂಡ ಪೈಲಟ್!

Sumana Upadhyaya

ಚಂಡೀಗಢ: ತಮ್ಮ ಗ್ರಾಮದ ಸುಮಾರು 70 ವರ್ಷಕ್ಕಿಂತ ಅಧಿಕ 22 ವಯೋವೃದ್ಧರಿಗೆ ವಿಮಾನ ಪ್ರಯಾಣ ಏರ್ಪಡಿಸುವ ಮೂಲಕ ಅದಂಪುರ್ ನ ಸಾರಂಗಪುರ ಗ್ರಾಮದ ಪೈಲಟ್ ವಿಕಾಸ್ ಜ್ಯಾನ್ ಎಲ್ಲರನ್ನೂ ಅಚ್ಚರಿಪಡಿಸಿದ್ದರು.

ಇಷ್ಟೊಂದು ಇಳಿವಯಸ್ಸಿನ ಪ್ರಯಾಣಿಕರನ್ನು ವಿಮಾನದಲ್ಲಿ ದೆಹಲಿಯಿಂದ ಅಮೃತಸರದ ಸ್ವರ್ಣ ಮಂದಿರಕ್ಕೆ, ಜಲಿಯನ್ ವಾಲಾ ಬಾಗ್ ಮತ್ತು ವಾಘಾ ಗಡಿಗೆ ಪ್ರಯಾಣಕ್ಕೆ ಬೇಕಾದ ಎಲ್ಲಾ ವ್ಯವಸ್ಥೆಯನ್ನು ಮಾಡಿದರು.

ಪತ್ರಿಕೆಯೊಂದರಲ್ಲಿ ಬಂದ ವರದಿ ಪ್ರಕಾರ, 22 ಪ್ರಯಾಣಿಕರಲ್ಲಿ 90 ವರ್ಷದ ಬಿಮ್ಲಾ, 80 ವರ್ಷದ ಅಮರ್ ಸಿಂಗ್, 78 ವರ್ಷದ ರಾಮಮೂತಿ ಮತ್ತು ಕಂಕಾರಿ ದೇವಿ, 75 ವರ್ಷದ ಗಿರಿದವಾರಿ ದೇವಿ, ಸುರ್ಜಾರಾಮ್ ಮತ್ತು ಖೆಮರಮ್, 72 ವರ್ಷದ ಆತ್ಮಾರಾಮ್ ಕೂಡ ಇದ್ದರು.

ಒಂದು ದಿನ ನಾವು ವಿಮಾನದೊಳಗೆ ಕಾಲಿಡುತ್ತೇವೆ,ವಿಮಾನದಲ್ಲಿ ಪ್ರಯಾಣಿಸುತ್ತೇವೆ ಎಂದು ಈ ವೃದ್ಧರು ಒಂದು ಬಾರಿ ಕೂಡ ಅಂದುಕೊಂಡಿರಲಿಲ್ಲವಂತೆ. ಇದೊಂದು ತಮ್ಮ ಜೀವನದಲ್ಲಿ ಅಮೂಲ್ಯ ಘಳಿಗೆ ಎನ್ನುತ್ತಾರೆ ವೃದ್ಧರಾದ ರಾಮಮೂತಿ ಮತ್ತು ಕಂಕಾರಿ ದೇವಿ,
ಬ್ಯಾಂಕಿನ ಹಿರಿಯ ವ್ಯವಸ್ಥಾಪಕರಾಗಿದ್ದ ಪೈಲಟ್ ವಿಕಾಸ್ ಅವರ ತಂದೆ ಮಹೇಂದ್ರ ಜಯನಿ ಅವರಿಗೆ ಮಗನ ಈ ಕೆಲಸ ಹೆಮ್ಮೆ ತಂದಿದೆ. ತಮ್ಮ ಮಗ ಹಿರಿಯರಿಗೆ ಯಾವತ್ತೂ ಗೌರವ ನೀಡುತ್ತಾನೆ. ಹಿರಿಯರನ್ನು ವಿಮಾನದಲ್ಲಿ ಕರೆದುಕೊಂಡು ಹೋಗುವುದು ಅವನ ಕನಸಾಗಿತ್ತು ಎಂದು ಹೆಮ್ಮೆಯಿಂದ ಹೇಳುತ್ತಾರೆ.

ಮಗ ಅವನ ಕನಸನ್ನು ನನಸು ಮಾಡಿಕೊಂಡಿದ್ದಾನೆ. ಇಂದಿನ ಯುವ ಜನಾಂಗ ನನ್ನ ಮಗನಂತೆ ಹಿರಿಯರಿಗೆ ಗೌರವ ತೋರಿಸಬೇಕು ಎಂದು ಮಹೇಂದ್ರ ಹೇಳುತ್ತಾರೆ.

SCROLL FOR NEXT