ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದು, ಒಂದು ಕುಟುಂಬಕ್ಕಾಗಿ ಕಾಂಗ್ರೆಸ್ ದೇಶವನ್ನೇ ಒಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ಬಿಜೆಪಿ ಸಂತೋಷ ಹಂಚುವುದರಲ್ಲಿ ಹಾಗೂ ಜನರನ್ನು ಒಗ್ಗೂಡಿಸುವ ತತ್ವದಲ್ಲಿ ನಂಬಿಕೆ ಇಟ್ಟಿದ್ದರೆ ಕಾಂಗ್ರೆಸ್ ಪಕ್ಷ ಒಂದು ಕುಟುಂಬಕ್ಕಾಗಿ ದೇಶವನ್ನೇ ಒಡೆಯುತ್ತಿದೆ ಎಂದು ಮೋದಿ ಹೇಳಿದ್ದಾರೆ. ಅ.10 ರಂದು 5 ಲೋಕಸಭಾ ಕ್ಷೇತ್ರಗಳ ಬಿಜೆಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಗುಜರಾತ್ ನಲ್ಲಿ ವಲಸಿಗರಾಗಿರುವ ಉತ್ತರ ಭಾರತದ ನೌಕರರು ಹಲ್ಲೆ ಭಯದಿಂದ ವಾಪಸ್ ತೆರಳುತ್ತಿದ್ದಾರೆ ಎಂಬ ವದಂತಿಗಳನ್ನೂ ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ, ಕಾಂಗ್ರೆಸ್ ದೇಶವನ್ನು ಒಡೆಯುತ್ತಿದೆ ಎಂದು ಆರೋಪಿಸಿದ್ದಾರೆ.
ನಾವು ಚುನಾವಣೆಗಳನ್ನು ಗೆಲ್ಲುತ್ತಿರುವುದು ಮತ್ತೊಬ್ಬರನ್ನು ಮಣಿಸುವ ಅಹಂಕಾರಕ್ಕಾಗಿ ಅಲ್ಲ, ಬದಲಾಗಿ ಜನರ ಸೇವೆ ಮಾಡುವುದಕ್ಕಾಗಿ ಎಂದು ಮೋದಿ ಹೇಳಿದ್ದಾರೆ.