ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್
ನವದೆಹಲಿ: ದೆಹಲಿ ಸಾರಿಗೆ ಸಚಿವ ಕೈಲಾಶ್ ಗಹ್ಲೋಟ್ ಮನೆ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿರುವ ಹಿನ್ನಲೆಯಲ್ಲಿ ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ಷಮೆಯಾಚಿಸಬೇಕೆಂದು ಬುಧವಾರ ಆಗ್ರಹಿಸಿದ್ದಾರೆ.
ಕೈಲಾಶ್ ಗಹ್ಲೋಟ್ ಅವರಿಗೆ ಸೇರಿದ ಕಂಪನಿಗಳು ಸೇರಿ 16 ಕಡೆಗಳಲ್ಲಿ ಆದಾಯ ತೆರಿಗೆ ಅಧಿಕಾರಿಗಳು ದೊಡ್ಡ ಪ್ರಮಾಣದಲ್ಲಿ ದಾಳಿ ನಡೆಸಿರುವುದಕ್ಕಿ ಕೇಜ್ರಿವಾಲ್ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀರವೇ ಮೋದಿ ಮತ್ತು ಮಲ್ಯ ಜೊತೆಗೆ ದೋಸ್ತಿ ನಮ್ಮ ಮೇಲೆ ದಾಳಿ ನಡೆಸುತ್ತಿದ್ದೀರಾ? ಸತ್ಯೇಂದರ್, ಮನೀಶ್ ಹಾಗೂ ನನ್ನ ಮೇಲೆ ದಾಳಿ ನಡೆಸಿದ್ದಿರಿ. ಅದರಿಂದ ಏನಾಯಿತು? ಏನಾದರೂ ಸಿಕ್ಕಿತಾ? ಸಿಗಲಿಲ್ಲವಲ್ಲ? ಆದ್ದರಿಂದ ಮುಂದಿನ ಬಾರಿ ದಾಳಿ ಮಾಡಿಸುವ ಮುನ್ನ, ದೆಹಲಿ ಜನರಿಂದಲೇ ಆಯ್ಕೆಯಾಗಿರುವ ಸರ್ಕಾರವನ್ನು ನಿರಂತರವಾಗಿ ಕಾಡುತ್ತಿರುವುದಕ್ಕಾಗಿ ಕನಿಷ್ಟಪಕ್ಷ ಕ್ಷಮೆಯನ್ನಾದರೂ ಕೇಳಿರಿ ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.
ಇದರಂತೆ ಆಮ್ ಆದ್ಮಿ ಪಕ್ಷದ ವಕ್ತಾರ ಸೌರಭ್ ಭಾರದ್ವಾಜ್ ಅವರು ಮಾತನಾಡಿ, ಆಮ್ ಆದ್ಮಿ ಪಕ್ಷದ ನಾಯಕರ ಮೇಲೆ ದಾಳಿ ನಡೆಸಿದಾಗಲೆಲ್ಲಾ ಏನೇನು ಸಿಕ್ಕಿದೆ ಎಂಬುದನ್ನು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಬೇಕು ಎಂದು ಆಗ್ರಹಿಸಿದ್ದಾರೆ. ಇಂತಹ ಅನೇಕ ದಾಳಿಗಳನ್ನು ಮಾಡಲಾಗಿದೆ. ಆದರೆ, ಅಧಿಕಾರಿಗಳಿಗೆ ಏನೂ ಸಿಕ್ಕಿಲ್ಲ. ಚಾರ್ಜ್ ಶೀಟ ಕೂಡ ಫೈಲ್ ಮಾಡಿಲ್ಲ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics