ದೇಶ

ಐಎನ್ಎಕ್ಸ್ ಮೀಡಿಯಾ ಕೇಸ್: ಕಾರ್ತಿ ಚಿದಂಬರಂಗೆ ಸೇರಿದ 54 ಕೋಟಿ ರೂ. ಮೌಲ್ಯದ ಆಸ್ತಿ ಇಡಿ ವಶಕ್ಕೆ

Sumana Upadhyaya

ನವದೆಹಲಿ: ಐಎನ್ ಎಕ್ಸ್ ಮೀಡಿಯಾ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ಹಣಕಾಸು ಖಾತೆ ಮಾಜಿ ಸಚಿವ ಪಿ ಚಿದಂಬರಂ ಅವರ ಪುತ್ರ ಕಾರ್ತಿ ಚಿದಂಬರಂ  ಭಾರತ, ಇಂಗ್ಲೆಂಡ್ ಮತ್ತು ಸ್ಪೈನ್ ನಲ್ಲಿ ಹೊಂದಿರುವ 54 ಕೋಟಿ ರೂಪಾಯಿಗಳ ಆಸ್ತಿಯನ್ನು ಜಪ್ತಿ ಮಾಡಿದೆ.

ಕೇಂದ್ರ ತನಿಖಾ ಸಂಸ್ಥೆಯಾಗಿರುವ ಜಾರಿ ನಿರ್ದೇಶನಾಲಯ, ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಕಾರ್ತಿ ಚಿದಂಬರಂ ಭಾರತದ ಕೊಡೈಕನಾಲ್, ತಮಿಳುನಾಡಿನ ಊಟಿ ಮತ್ತು ದೆಹಲಿಯ ಜೊರ್ಬಗ್ ನಲ್ಲಿ ಹೊಂದಿರುವ ಫ್ಲಾಟ್ ಗಳ ನ್ನು ವಶಕ್ಕೆ ತೆಗೆದುಕೊಳ್ಳುವ ಕುರಿತು ಸಹ ತಾತ್ಕಾಲಿಕ ಆದೇಶ ಹೊರಡಿಸಿದೆ.

ಇಂಗ್ಲೆಂಡಿನ ಸೊಮರ್ಸೆಟ್ ನಲ್ಲಿ ಮನೆ ಮತ್ತು ಹಳ್ಳಿಮನೆ, ಬಾರ್ಸಿಲೊನಾ ಹಾಗೂ ಸ್ಪೈನ್ ನಲ್ಲಿ ಟೆನ್ನಿಸ್ ಕ್ಲಬ್ ಗಳ ವಿವರಗಳನ್ನು ಸಹ ವಶಕ್ಕೆ ತೆಗೆದುಕೊಂಡಿದೆ. ಅಡ್ವಾಂಟೇಜ್ ಸ್ಟ್ರಾಟಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್ ಹೆಸರಿನಲ್ಲಿ ಕಾರ್ತಿ ಚಿದಂಬರಂ ಚೆನ್ನೈಯ ಬ್ಯಾಂಕೊಂದರಲ್ಲಿ ಇರಿಸಿರುವ 90 ಲಕ್ಷ ಸ್ಥಿರ ಠೇವಣಿ ವಿವರಗಳನ್ನು ಕೂಡ ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿದೆ. ಈ ಸಂಸ್ಥೆ ಅಕ್ರಮವಾಗಿ ಕಾರ್ತಿ ಚಿದಂಬರಂಗೆ ಸೇರಿದ್ದಾಗಿದ್ದು ಎಲ್ಲಾ ಆಸ್ತಿಗಳನ್ನು ಒಟ್ಟು ಸೇರಿಸಿದರೆ ಸುಮಾರು 54 ಕೋಟಿ ರೂಪಾಯಿಗಳಾಗುತ್ತವೆ.

ಚಿದಂಬರಂ ಅವರು ಕೇಂದ್ರ ಸಚಿವರಾಗಿದ್ದ ಸಂದರ್ಭದಲ್ಲಿ ಐಎನ್ ಎಕ್ಸ್ ಮೀಡಿಯಾಗೆ 2007ನೇ ಇಸವಿಯಲ್ಲಿ ಸುಮಾರು 305 ಕೋಟಿ ಸಾಗರೋತ್ತರ ಹಣವನ್ನು ಸ್ವೀಕರಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ ಹೇಳಿದೆ. ಜಾರಿ ನಿರ್ದೇಶನಾಲಯ ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿ ತೀವ್ರ ವಿಚಾರಣೆ ನಡೆಸಿತ್ತು.

SCROLL FOR NEXT