ಲಖನೌ: ಸಮಾಜವಾದಿ ಸೆಕ್ಯುಲರ್ ಮೋರ್ಚಾ (ಎಸ್ಎಸ್ಎಂ) ಅಧ್ಯಕ್ಷ ಮತ್ತು ಜಸ್ವಂತ್ ನಗರ ಶಾಸಕರಾದ ಶಿವಪಾಲ್ ಯಾದವ್ ಅವರಿಗೆ ಝಡ್ ಪ್ಲಸ್ ಭದ್ರತೆ ಒದಗಿಸಲು ಉತ್ತರ ಪ್ರದೇಶ ಸರ್ಕಾರ ತೀರ್ಮಾನಿಸಿದೆ. ಯಾದವ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ತಿಳಿದುಬಂದಿದೆ.
ಸೆಕ್ಯುಲರ್ ಮೋರ್ಚಾ ಸಂಸ್ಥಾಪಕರಾದ ಯಾದವ್ ಅವರಿಗೆ 6, ಲಾಲ್ ಬಹದ್ದೂರ್ ಶಾಸ್ತ್ರಿ ಮಾರ್ಗ್ ನಲ್ಲಿನ ವಿಶಾಲ ಬಂಗಲೆಯನ್ನು ಇದಾಗಲೇ ಸರ್ಕಾರ ಒದಗಿಸಿದೆ. ವಿಶೇಷವೆಂದರೆ ಈ ಹಿಂದೆ ಬಿಎಸ್ಪಿ ಅಧಿನಾಯಕಿ ಮಾಯಾವತಿ ಮೇ 31, 2018ರಂದು ತೆರವು ಗೊಳಿಸಿದ್ದ ಅದೇ ಬಂಗಲೆಯನ್ನು ಯಾದವ್ ಅವರಿಗೆ ಒದಗಿಸಲಾಗಿದೆ. ಯಾದವ್ ಅವರ ಜೀವಕ್ಕೆ ಅಪಾಯವಿರುವ ಕಾರಣಕ್ಕಾಗಿ ಅವರಿಗೆ ಹೆಚ್ಚುವರಿ ಭದ್ರತೆ ಒದಗಿಸಲಾಗುತ್ತಿದೆ ಎಂದು ಮೂಲಗಳು ಹೇಳಿದೆ.
ಪಕ್ಷದ ಪಾರಂಪರಿಕತೆ, ವರ್ಗಾವಣೆ ಮೇರೆಗೆ ಎಸ್ಪಿ ಮುಖ್ಯಸ್ಥ ಹಾಗೂ ಅವರ ಸೋದರ್ಳಿಯ ಅಖಿಲೇಶ್ ಯಾದವ್ ಅವರೊಡನೆ ತೀವ್ರ ಮನಸ್ತಾಪ ಹೊಂದಿರುವ ಶಿವಪಾಲ್ ಯಾದವ್ ಪಕ್ಷದ ನಾಯಕರ ವಿರುದ್ಧ ಬಂಡಾಯವೆದ್ದಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಜೀವ ಬೆದರಿಕೆ ಕರೆಗಳು ಬಂದಿದ್ದು ಅವರ ಜೀವಕ್ಕೆ ಅಪಾಯವಿದೆ ಎಂದುಗುಪ್ತಚರ ಇಲಾಖೆ ವರದಿ ಮಾಡಿದೆ.
ಪ್ರಸ್ತುತ ವಿವಿಐಪಿ ಝಡ್ ಪ್ಲಸ್ ಭದ್ರತೆಯನ್ನು ಉತ್ತರ ಪ್ರದೇಶ ರಾಜ್ಯದಲ್ಲಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಅವರ ತಂದೆ ಮುಲಾಯಂ ಸಿಂಗ್ ಯಾದವ್ ಮತ್ತು ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರುಗಳಿಗೆ ಮಾತ್ರವೇ ಒದಗಿಸಲಾಗುತ್ತಿದೆ.ಇದೀಗ ರಾಜ್ಯ ಸರ್ಕಾರ ಶಿವಪಾಲ್ ಗೆ ಹೆಚ್ಚುವರಿ ಭದ್ರತೆ ಒದಗಿಸಲು ಮುಂದಾಗಿರುವುದು ಹಲವರಿಗೆ ಹುಬ್ಬೇರುವಂತೆ ಮಾಡಿದೆ.