ಮುಂಬೈ: ಖ್ಯಾತ ಶಾಸ್ತ್ರೀಯ ಸಂಗೀತ ಲೋಕದ ದಿಗ್ಗಜೆ ಅನ್ನಪೂರ್ಣ ದೇವಿಯವರು ಶನಿವಾರ ಮುಂಬೈನಲ್ಲಿ ವಿಧಿವಶರಾಗಿದ್ದಾರೆ.
ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅನ್ನಪೂರ್ಣದೇವಿಯವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಿಗ್ಗೆ 3.51ರ ಸುಮಾರಿಗೆ ಆಸ್ಪತ್ರೆಯಲ್ಲಿಯೇ ನಿಧನ ಹೊಂದಿದ್ದಾರೆಂದು ತಿಳಿದುಬಂದಿದೆ.
ಅನ್ನಪೂರ್ಣ ದೇವಿ ಹಿಂದೂಸ್ಥಾನಿ ಸಂಗೀತ ವಲಯದಲ್ಲಿ ಬಹುದೊಡ್ಡ ಹೆಸರನ್ನು ಪಡೆದಿದ್ದಾರೆ. ಪ್ರಖ್ಯಾತ ಸಂಗೀತ ಉಸ್ತಾದ್ ಅಲ್ಲಾವುದ್ದೀನ್ ಖಾನ್ ಅವರ ಮಗಳು, ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ ಅವರ ತಂಗಿ. ಭಾರತ ರತ್ನ, ಪಂಡಿತ್ ರವಿಶಂಕರ್ ಅವರ ವಿಚ್ಛೇದಿತ ಪತ್ನಿಯಾಗಿದ್ದಾರೆ. ಭಾರತೀಯ ಸಂಗೀತ ಜಗತ್ತು ಕಂಡ, ಅದರಲ್ಲೂ ಸಿತಾರ್ ಹಾಗೂ ಸುರ್ಬಹಾರ್ ವಾದ್ಯಗಳ ಅತ್ತುತ್ತಮ ವಾದಕಿಯಾಗಿ ಎಂಬ ಹೆಗ್ಗಳಿಕೆಯೂ ಇವರಿಗಿದೆ.