ದೇಶ

ದೆಹಲಿಯಲ್ಲಿ ಹಾಡಹಗಲೇ ದರೋಡೆ: ಕ್ಯಾಶಿಯರ್ ಹತ್ಯೆಗೈದು ರೂ.3 ಲಕ್ಷ ಲೂಟಿ, ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ

Manjula VN
ನವದೆಹಲಿ: ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ದರೋಡೆ ನಡೆದಿದ್ದು, ಬ್ಯಾಂಕ್ ವೊಂದಕ್ಕೆ ನುಗ್ಗಿರುವ ದುಷ್ಕರ್ಮಿಗಳು ಕ್ಯಾಶಿಯರ್'ಗೆ ಗುಂಡಿಟ್ಟು ಹತ್ಯೆಗೈದು ರೂ.3 ಲಕ್ಷ ಲೂಟಿ ಮಾಡಿರುವ ಘಟನೆ ಶನಿವಾರ ನಡೆದಿದೆ. 
ದೆಹಲಿಯ ಖೈರಾ ಪ್ರದೇಶದಲ್ಲಿರುವ ಕಾರ್ಪೋರೇಷನ್ ಬ್ಯಾಂಕ್'ಗೆ ನುಗ್ಗಿರುವ ಶಸ್ತ್ರಾಸ್ತ್ರ ಹೊಂದಿರುವ 6 ದುಷ್ಕರ್ಮಿಗಳು ಕ್ಯಾಶಿಯಲ್ ಸಂತೋಶ್ ಕುಮಾರ್ ಎಂಬುವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಅಲ್ಲದೆ, ಮತ್ತಿಬ್ಬರನ್ನೂ ಗಾಯಗೊಳಿಸಿದ್ದಾರೆ. 
ಮೊದಲಿಗೆ ಬ್ಯಾಂಕ್ ನ ಭದ್ರತಾ ಪಡೆಯ ಮೇಲೆ ದಾಳಿ ನಡೆಸಿರುವ ದುಷ್ಕರ್ಮಿಗಳು ಆತನಿಂದ ರೈಫಲ್ ಕಸಿದುಕೊಂಡಿದ್ದಾರೆ. ನಂತರ ಕ್ಯಾಶಿಯರ್ ನನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ. ಬಳಿಕ ರೂ.3 ಲಕ್ಷ ಹಣವನ್ನು ದೋಚಿ ಸ್ಥಳದಿಂದ ಪರಾರಿಯಾಗಿದ್ದಾರೆ. 90 ಸೆಕೆಂಡ್ ಗಳಿರುವ ಈ ಭೀಕರ ದೃಶ್ಯ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.
ಬ್ಯಾಂಕ್'ಗೆ ನುಗ್ಗಿರುವ ದುಷ್ಕರ್ಮಿಗಳು 10 ಗ್ರಾಹಕರು, 6 ಮಂದಿ ಸಿಬ್ಬಂದಿಗಳು ಸೇರಿ ಒಟ್ಟು 16 ಮಂದಿಯನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದಾರೆ. ಬಳಿಕ ಕ್ಯಾಶಿಯರ್ ಸಂತೋಷ್ ಬಳಿಯಿದ್ದ ಹಣವನ್ನು ಕಸಿಯಲು ಯತ್ನಿಸಿದ್ದಾರೆ. ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದಾಗ ಆತನ ಮೇಲೆ ಗುಂಡು ಹಾರಿಸಿ, ಹಣವನ್ನು ಲೂಟಿ ಮಾಡಿ ಪರಾರಿಯಾಗಿದ್ದಾರೆ. ಕೂಡಲೇ ಸಂತೋಷ್ ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಆತ ಅಷ್ಟರಲ್ಲಾಗಲೇ ಮೃತಪಟ್ಟಿದ್ದಾನೆಂದು ಪೊಲೀಸರು ಹೇಳಿದ್ದಾರೆ. 
ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿರುವ ದೆಹಲಿ ಪೊಲೀಸರು, ದರೋಡೆಕೋರರನ್ನು ಗುರುತು ಹಿಡಿಯಲಾಗಿದ್ದು, ಬಂಧನಕ್ಕಾಗಿ ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದ್ದಾರೆ. 
SCROLL FOR NEXT