ಮುಜಾಫರ್ನಗರ: ತನ್ನನ್ನು ನೋಡಿ ಬೊಗಳುತ್ತಿದ್ದ ನಾಯಿಗೆ ವ್ಯಕ್ತಿಯೊಬ್ಬ ಹೊಡೆದಿದ್ದು, ಈ ವೇಳೆ ವ್ಯಕ್ತಿ ಮೇಲೆ ಕೆಂಡಾಮಂಡಲಗೊಂಡ ಮೂವರು ಆತನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಉತ್ತರಪ್ರದೇಶದ ಶಮ್ಲಿ ಜಿಲ್ಲೆಯ ಬಧೇವ್ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಸಚಿನ್ ಕಶ್ಯಪ್ ಎಂಬುವವರು ನಿನ್ನೆ ಸಂಜೆ ಮನೆಗೆ ಹಿಂತಿರುಗುತ್ತಿದ್ದರು. ಈ ವೇಳೆ ರಸ್ತೆಯಲ್ಲಿದ್ದ ನಾಯಿಯೊಂದು ಅವರನ್ನು ನೋಡಿ ಬೊಗಳಲು ಆರಂಭಿಸಿದೆ. ಅಲ್ಲದೆ, ಹಿಂಬಾಲಿಸಲು ಆರಂಭಿಸಿದೆ.
ಈ ವೇಳೆ ಕಶ್ಯಪ್ ನಾಯಿಗೆ ಹೊಡೆದಿದ್ದಾರೆ. ಇದಕ್ಕೆ ಸ್ಥಳದಲ್ಲಿದ್ದ ಮೂವರು ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಮಾತಿನ ಚಕಮಕಿಗಳೂ ಕೂಡ ನಡೆದಿದೆ. ಈ ವೇಳೆ ಕಶ್ಯಪ್ ಮೇಲೆ ಕೆಂಡಾಮಂಡಲಗೊಂಡಿರುವ ವ್ಯಕ್ತಿಯೊಬ್ಬ ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆಂದು ಪೊಲೀಸ್ ಅಧಿಕಾರಿ ಅಶೋಕ್ ಕುಮಾರ್ ಅವರು ಹೇಳಿದ್ದಾರೆ.
ಈ ಸಂಬಂಧ ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದಾರೆ.