ದೇಶ

ಪಿಎನ್ ಬಿ ಹಗರಣ: ಚೋಕ್ಸಿ, ಇತರರಿಗೆ ಸೇರಿದ 218 ಕೋಟಿ ರು.ಆಸ್ತಿ ಮುಟ್ಟುಗೋಲು

Lingaraj Badiger
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್‌(ಪಿಎನ್ ಬಿ) ಹಗರಣಕ್ಕೆ ಸಂಬಂಧಿಸಿದಂತೆ  ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿಗೆ ಹಾಗೂ ಇತರರಿಗೆ ಸೇರಿದ 218 ಕೋಟಿ ಮೌಲ್ಯದ ಆಸ್ತಿ ಮತ್ತು  ಸ್ವತ್ತುಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ ಎಂದು ಬುಧವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮೆಹುಲ್ ಚೋಕ್ಸಿ, ಪಿಎನ್ ಬಿ ಹಗರಣದ ಪ್ರಮುಖ ಆರೋಪಿ ನೀರವ್ ಮೋದಿ ಆಪ್ತ ಮಹಿರ್ ಭನ್ಸಾಲಿ ಹಾಗೂ ಎಪಿ ಜೆಮ್ಸ್ ಆಂಡ್ ಜ್ಯುವೆಲ್ಲರಿ ಪಾರ್ಕ್ ಗೆ ಸೇರಿದ ದೇಶ, ವಿದೇಶಗಳಲ್ಲಿನ ಆಸ್ತಿ ಮತ್ತು ಸೊತ್ತುಗಳ ಜಪ್ತಿಗೆ ಇಡಿ ಮುಂಬೈ ಕಚೇರಿ ಆದೇಶಿಸಿದೆ ಎಂದು ಅವರು ತಿಳಿಸಿದ್ದಾರೆ.
ಜಪ್ತಿ ಮಾಡಿದ ಒಟ್ಟು ಆಸ್ತಿಯ ಮೌಲ್ಯ 218,46 ಕೋಟಿ ರುಪಾಯಿ ಎಂದು ಅವರು ತಿಳಿಸಿದ್ದಾರೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ)ಗೆ ಸಾವಿರಾರು ಕೋಟಿ ವಂಚನೆ ಮಾಡಿ ಆ್ಯಂಟಿಗುವಾ ಹಾಗೂ ಬರ್ಬುಡದಲ್ಲಿ ತಲೆ ಮರೆಸಿಕೊಂಡಿರುವ ಮೆಹುಲ್ ಚೋಕ್ಸಿ, ಬ್ಯಾಂಕ್ ಗೆ ವಂಚಿಸಿದ್ದ ಹಣದಲ್ಲಿ 3,250 ಕೋಟಿ ರುಪಾಯಿಯನ್ನು ವಿದೇಶದಲ್ಲಿ ಹೂಡಿಕೆ ಮಾಡಿರುವುದನ್ನು ಜಾರಿ ನಿರ್ದೇಶನಾಲಯ(ಇಡಿ) ಪತ್ತೆ ಹಚ್ಚಿದೆ. ಆದರೆ ಇಡಿ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ಚೋಕ್ಸಿ, ನನ್ನ ವಿರುದ್ಧದ ಎಲ್ಲಾ ಆರೋಪ ಆಧಾರ ರಹಿತವಾಗಿದ್ದು, ಕಾನೂನು ಬಾಹಿರವಾಗಿ ನನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
SCROLL FOR NEXT