ನವದೆಹಲಿ: ರಾಫೆಲ್ ಒಪ್ಪಂದದಲ್ಲಿ ರಿಲಯನ್ಸ್ ಡಿಫೆನ್ಸ್ ಜತೆಗೆ ನಾವು ಪಾಲುದಾರಿಕೆ ಮಾಡಿಕೊಳ್ಳದೆ ಬೇರೆ ಆಯ್ಕೆಯೇ ಇರಲಿಲ್ಲ ಎಂದು ಯುದ್ಧ ವಿಮಾನ ತಯಾರಿಕಾ ಸಂಸ್ಥೆ ಡಸ್ಸಾಲ್ಟ್ ಏವಿಯೇಷನ್ ಹೇಳಿಕೊಂಡಿದೆ ಎಂದು ಪ್ರೆಂಚ್ ಮೂಲದ ವೆಬ್ ಸೈಟ್ ವೊಂದು ವರದಿ ಮಾಡಿದೆ.
ಈ ಬಗ್ಗೆ ಡಸ್ಸಾಲ್ಟ್ ಸಂಸ್ಥೆ ಆಂತರಿಕ ದಾಖಲೆಗಳನ್ನು ಬಹಿರಂಗಗೊಳಿಸಿರುವ ವೆಬ್ ಸೈಟ್ ಡಸ್ಸಾಲ್ಟ್ ಸಂಸ್ಥೆ ತನ್ನ ಕಾರ್ಮಿಕರಿಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ಈ ಬಗ್ಗೆ ಹೇಳಿಕೆ ನೀಡಿದೆ ಎಂದು ವರದಿ ಮಾಡಿದೆ. ಡಸ್ಸಾಲ್ಟ್ ಏವಿಯೇಷನ್ ನ ಎರಡು ಕಾರ್ಮಿಕ ಸಂಘಟನೆಗಳಾದ ಸಿಜಿಟಿ ಮತ್ತು ಸಿಎಫ್ ಡಿಟಿಗಳು ಸದಸ್ಯರಿಗಾಗಿ ಬಿಡುಗಡೆ ಮಾಡಿರುವ ಪ್ರಕಟಣೆಗಳಲ್ಲಿ ಈ ಮಾಹಿತಿ ಇದೆ ಎಂದು ವೆಬ್ ಸೈಟ್ ವರದಿ ಮಾಡಿದೆ. ಅಂತೆಯೇ ಅವನ್ನು ಫ್ರಾನ್ಸ್‌ನ ‘ಪೋರ್ಟಲ್ ಏವಿಯೇಷನ್’ ಎಂಬ ಬ್ಲಾಗ್ ಪ್ರಕಟಿಸಿದೆ ಎನ್ನಲಾಗಿದೆ.
'ನಾವು ಈ ಪ್ರಕಟಣೆಗಳನ್ನು ಅರ್ಥೈಸಲು ಹೋಗುವುದಿಲ್ಲ. ಬದಲಿಗೆ ನೀವೇ ಅದನ್ನು ಓದಿ ಅರ್ಥಮಾಡಿಕೊಳ್ಳಿ' ಎಂದು ಪೋರ್ಟಲ್ ಏವಿಯೇಷನ್ ತನ್ನ ವರದಿಯಲ್ಲಿ ಸೂಚಿಸಿದೆ. ರಾಫೆಲ್ ಒಪ್ಪಂದದಲ್ಲಿ ಡಸ್ಸಾಲ್ಟ್ ಕಂಪನಿಯು ರಿಲಯನ್ಸ್ ಡಿಫೆನ್ಸ್ ಜತೆಗೆ ಪಾಲುದಾರಿಕೆ ಮಾಡಿಕೊಂಡ ಬಗ್ಗೆ ಕಂಪನಿಯ ಕಾರ್ಮಿಕರು ಆಕ್ಷೇಪ ವ್ಯಕ್ತಪಡಿಸಿದ್ದರು. ವಿದೇಶಿ ಪಾಲುದಾರಿಕೆಯ ಅನಿವಾರ್ಯತೆಯನ್ನು ಮನವರಿಕೆ ಮಾಡಿಕೊಡಲು ಕಂಪನಿಯ ಉನ್ನತಾಧಿಕಾರಿ ಲೋಯಿಕ್ ಸೆಗಲೆನ್ ಅವರು 2017ರ ಮೇ 11ರಂದು ಕಾರ್ಮಿಕರಿಗೆ ನೀಡಿದ ಸಮಜಾಯಿಷಿಯ ವಿವರ ಈ ಪ್ರಕಟಣೆಗಳಲ್ಲಿ ಇದೆ ಎನ್ನಲಾಗಿದೆ.
ವಿಮಾನ ಮಾರಾಟಕ್ಕಾಗಿ ರಿಲಯನ್ಸ್ ಜೊತೆ ಒಪ್ಪಂದ ಅನಿವಾರ್ಯವಾಗಿತ್ತು
'ಭಾರತದಲ್ಲೇ ತಯಾರಿಸಿ (ಮೇಕ್ ಇನ್ ಇಂಡಿಯಾ) ಅಭಿಯಾನದ ಅಡಿ 'ಡಸ್ಸಾಲ್ಟ್ ರಿಲಯನ್ಸ್ ಏರೊಸ್ಪೇಸ್' ಎಂಬ ಕಂಪನಿಯನ್ನು ಸ್ಥಾಪಿಸುವ ಪ್ರಸ್ತಾವವನ್ನು ನಾಗಪುರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಮುಂದೆ ಇಡಲಾಗಿತ್ತು. ಭಾರತಕ್ಕೆ ರಾಫೆಲ್ ಯುದ್ಧವಿಮಾನಗಳನ್ನು ರಫ್ತು ಮಾಡುವ ಒಪ್ಪಂದಕ್ಕೆ ಪ್ರತಿಫಲವಾಗಿ ನಾವು ಈ ಪ್ರಸ್ತಾಪವನ್ನು ಒಪ್ಪಿಕೊಳ್ಳುವ ಅನಿವಾರ್ಯತೆಯಿತ್ತು' ಎಂದು ಸಿಜಿಟಿ ಮತ್ತು ಸಿಎಫ್ ಡಿಟಿಯ ಪ್ರಕಟಣೆಯಲ್ಲಿ ವಿವರಿಸಲಾಗಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos